ಕೊಚ್ಚಿ: ನಗರದ ಹೊಟೇಲೊಂದರಿಂದ ಆನ್ಲೈನ್ ಮೂಲಕ ಚಿಕನ್ ಶವರ್ಮಾ ತರಿಸಿ ತಿಂದ ಯುವಕ ತೀವ್ರ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೊಟ್ಟಾಯಂ ಮೂಲದ ರಾಹುಲ್ ನಾಯರ್ (24) ಮೃತ ಯುವಕ. ಕೊಟ್ಟಾಯಂ ಮೂಲದ ರಾಹುಲ್ ಆನ್ಲೈನ್ ಮೂಲಕ ‘ಲೇ ಹಯಾತ್’ ಎಂಬ ರೆಸ್ಟೋರೆಂಟ್ನಿಂದ ಚಿಕನ್ ಶವರ್ಮಾವನ್ನು ತರಿಸಿಕೊಂಡಿದ್ದಾನೆ. ಅದನ್ನು ತಿಂದ ಬಳಿಕ ಇದ್ದಕ್ಕಿದ್ದ ಹಾಗೆ ತೀವ್ರ ಅನಾರೋಗ್ಯಕ್ಕೀಡಾಗಿ ಕಾಕ್ಕನಾಡುನಲ್ಲಿನ ಸನ್ರೈಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕಿತ್ಸೆ ಬಳಿಕ ಕೊಂಚ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದು, ಬಳಿಕ ಹೊಟ್ಟೆಯಲ್ಲಿ ನೋವು ಕಾಣಿಸಿದ್ದರಿಂದ ಅಕ್ಟೋಬರ್ 22 ರಂದು ಆಸ್ಪತ್ರೆಗೆ ಮತ್ತೆ ದಾಖಲು ಆಗಿದ್ದನು ಎನ್ನಲಾಗಿದೆ.
ಎರಡನೇ ಸಲ ಆಸ್ಪತ್ರೆ ಸೇರಿದ ಯುವಕನ ಸ್ಥಿತಿ ಗಂಭೀರವಾಗುತ್ತಾ ಹೋಗಿದ್ದು, ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ರಿಲೀಸ್ ಮಾಡಿರುವ ಹೆಲ್ತ್ ಬುಲೆಟಿನ್ ಅಲ್ಲಿ ಯುವಕನ ಕಿಡ್ನಿ ಹಾಗೂ ಲೀವರ್ ಹಾನಿಯಾಗಿದ್ದು ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಕಿಡ್ನಿ ಮತ್ತು ಲಿವರ್ ಹಾಳಾಗಲು ಕಾರಣ ದೇಹದಲ್ಲಿ ವಿಷ ಸೇರಿರುವುದು ಪಕ್ಕಾ. ಇದು ಆತ ತಿಂದ ಚಿಕನ್ ಶವರ್ಮಾ ಪದಾರ್ಥದಿಂದ ಆಗಿದಿಯೋ ಅಥವಾ ಬೇರೆ ಆಹಾರದಿಂದ ಆಗಿದಿಯೋ ಅನ್ನೋದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ವೈದ್ಯರು ಹೇಳಿದ್ದಾರೆ.
ಮೃತ ಯುವಕನ ಸಂಬಂಧಿಕರು ರೆಸ್ಟೋರೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಸರ್ಕಾರದ ಆದೇಶದಂತೆ ಅದನ್ನು ಮುಚ್ಚಲಾಗಿದೆ. ರೆಸ್ಟೋರೆಂಟ್ ಮಾಲಕರ ವಿರುದ್ಧ ತೃಕ್ಕಾಕರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಸಿ ಮೊಟ್ಟೆ, ಬೇಯಿಸದ ಎಣ್ಣೆ, ಬೆಳ್ಳುಳ್ಳಿ ಸೇರಿಸಿ ಮಾಡುವ ಮಸಾಲೆಯೊಂದು ಶವರ್ಮಾ ಜೊತೆ ಹೇರಳವಾಗಿ ಬೆರೆಸಲಾಗುತ್ತಿದ್ದು, ಆ ಬಿಳಿಯಾದ ಪದಾರ್ಥ ಸ್ವಲ್ಚ ಹಳೆಯದಾದರೂ ವಿಷವಾಗಿ ಮಾರ್ಪಾಡಾಗುತ್ತೆ ಎಂದು ಹೇಳಲಾಗುತ್ತಿದೆ. ಇಂತಹ ಪದಾರ್ಥ ತಿಂದು ಸಾವನ್ನಪ್ಪಿದ ಇತರ ಘಟನೆಗಳೂ ಇವೆ. ತಿಂಡಿಪ್ರಿಯರು ಎಚ್ಚರವಾಗಬೇಕಾಗಿದೆ ಎಂದು ನಾಗರಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.