ನವದೆಹಲಿ: ಗಾಝಾಗೆ ಜಗತ್ತಿನಾದ್ಯಂತ ನೆರವು ಹರಿದು ಬರುತ್ತಿದೆ. ಇಂದು ಭಾರತ ವೈದ್ಯಕೀಯ ಅಗತ್ಯಗಳು ಮತ್ತು ವಿಪತ್ತು ಪರಿಹಾರ ವಸ್ತುಗಳನ್ನು ಕಳುಹಿಸಿಕೊಟ್ಟಿದೆ.
ಗಾಝಾದಲ್ಲಿ ಲಕ್ಷಾಂತರ ನಾಗರಿಕರು ನಿರ್ಗತಿಕರಾಗಿದ್ದಾರೆ. ಪುಟ್ಟ ಮಕ್ಕಳು, ಮಹಿಳೆಯರು ಎಂದು ಭೇದವಿಲ್ಲದೆ ಅವರ ದೇಹ ಛಿದ್ರಛಿದ್ರವಾಗಿವೆ. ಕಟ್ಟಗಳು ಸುಟ್ಟು ಹೋಗಿವೆ. ಆಸ್ಪತ್ರೆಗಳೂ ನೆಲಕ್ಕುರುಳಿವೆ. ಇಂತಹ ಸಂದರ್ಭದಲ್ಲಿ ಅನೇಕ ರಾಷ್ಟ್ರಗಳು ಮಾನವೀಯ ನೆರವು ಘೋಷಿಸಿದೆ. ಇದೀಗ ಭಾರತವೂ ಆ ಲೀಸ್ಟಿಗೆ ಸೇರಿದೆ.
ಭಾರತ ಕಳುಹಿಸಿಕೊಟ್ಟಿರುವ ಅಗತ್ಯ ವಸ್ತುಗಳಲ್ಲಿ ಜೀವ ಉಳಿಸುವ ಔಷಧಿಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್‌ಗಳು, ಮಲಗುವ ಚೀಲಗಳು, ಟಾರ್ಪೌಲಿನ್‌ಗಳು, ನೈರ್ಮಲ್ಯ ಉಪಯುಕ್ತತೆಗಳು ಮತ್ತು ಇತರ ಅಗತ್ಯ ವಸ್ತುಗಳ ಜೊತೆಗೆ ನೀರು ಶುದ್ಧೀಕರಣ ಮಾತ್ರೆಗಳನ್ನು ಒಳಗೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವೂ ಎರಡು ವಾರಗಳನ್ನು ಪೂರೈಸಿ ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ ಕದನ ಕಾರ್ಮೋಡ ಮಾತ್ರ ತಿಳಿಯಾಗಿಲ್ಲ. ಈಜಿಪ್ಟ್ನಲ್ಲಿ ನಡೆದ ಶಾಂತಿ ಶೃಂಗಸಭೆಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಮಾನವೀಯ ಕದನ ವಿರಾಮಕ್ಕಾಗಿ ಒತ್ತಾಯಿಸಿದ್ದಾರೆ.