ಬೆಂಗಳೂರು: ನಿನ್ನೆ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಿದ್ದ ಪಾಕ್ ಕ್ರಿಕೆಟ್ ಪ್ರೇಮಿಗೆ ಪೊಲೀಸ್ ಅಧಿಕಾರಿಯೊಬ್ಬರು ಅಡ್ಡಿಪಡಿಸಿದ ಘಟನೆ ನಡೆದಿದೆ. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಪಂದ್ಯ ವೀಕ್ಷಿಸಲು ಪಾಕಿಸ್ತಾನದಿಂದ ಬಂದಿದ್ದ ಅಭಿಮಾನಿಯೊಬ್ಬ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತ ತನ್ನ ತಂಡವನ್ನು ಹುರಿದುಂಬಿಸುತ್ತಿರುವಾಗ ಅಲ್ಲಿಗೆ ಬಂದ ಪೊಲಿಸ್ ಅಧಿಕಾರಿಯೊಬ್ಬರು, ಇಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಬಾರದು, ಭಾರತ್ ಮಾತಾ ಕೀ ಜಿಂದಾಬಾದ್ ಎಂದು ಘೋಷಣೆ ಕೂಗಲು ಅವಕಾಶ ಇದೆ ಎಂದು ಪಾಕ್ ಅಭಿಮಾನಿಗೆ ಹೇಳಿದರು. ಇದರಿಂದ ಅಸಮಾಧನಗೊಂಡ ಪಾಕ್ ಅಭಿಮಾನಿ, ನಾನು ಪಾಕಿಸ್ತಾನದಿಂದ ಬಂದಿದ್ದೇನೆ, ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳದೇ ಮತ್ಯಾರಿಗೆ ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.
ನಾನು ಮೊಬೈಲ್ನಲ್ಲಿ ರೆಕಾರ್ಡ್ ಮಾಡುತ್ತೇನೆ ಎಂದ ಪಾಕ್ ಅಭಿಮಾನಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಬಾರದಾ ಹೇಳಿ ಎಂದು ಪೊಲೀಸ್ ಅಧಿಕಾರಿಯ ಮುಖಕ್ಕೆ ಮೊಬೈಲ್ ಹಿಡಿದಿದ್ದಾನೆ. ಪಾಕ್ ಅಭಿಮಾನಿ ವೀಡಿಯೋ ರೆಕಾರ್ಡ್ ಮಾಡುತ್ತಿದ್ದಂತೆ ಪೊಲೀಸ್ ಅಧಿಕಾರಿ ಸ್ಥಳದಿಂದ ತೆರಳಿದರು. ಅಲ್ಲಿದ್ದ ಮತ್ತೊಬ್ಬರು ಅಧಿಕಾರಿ ಪಾಕ್ ಕ್ರಿಕೆಟ್ ಪ್ರೇಮಿಯನ್ನು ಸಂತೈಸುವುದು ವೈರಲ್ ವೀಡಿಯೋದಲ್ಲಿ ಸೆರೆಯಾಗಿದೆ.