ಸರ್ವಾಧಿಕಾರದ ಭೀಷಣ ಕಾಲ

0
425

ಸದ್ಯ ನಮ್ಮ ಭಾರತ ದೇಶದಲ್ಲಿ ಬದುಕುವ ಹಕ್ಕಿನ ಬಗ್ಗೆ ಆತಂಕಕ್ಕೊಳಗಾಗಿರುವುದು ಕೇವಲ ಜನಸಾಮಾನ್ಯರು ಮಾತ್ರವಲ್ಲ. ಸಂತ್ರಸ್ತರಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸುತ್ತಿರುವ ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು, ಸಂಘಟನೆಗಳು ಹಾಗೂ ಅದರ ಕಾರ್ಯಕರ್ತ-ನಾಯಕರು ಎಲ್ಲರೂ ಜೀವಭಯದಲ್ಲಿದ್ದಾರೆ. ಮೊನ್ನೆಯಷ್ಟೇ ‘ದಿ ವೈಯರ್’ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಸೊಹ್ರಾಬುದ್ದೀನ್ ಪ್ರಕರಣದ ಬದುಕುಳಿದಿರುವ ಏಕೈಕ ಸಾಕ್ಷಿ ನಿವತ್ತ ಪೊಲೀಸ್ ಅಧಿಕಾರಿ ಸೋಲಂಕಿ ತನಗಿರುವ ಜೀವಭಯವನ್ನು ಬಹಿರಂಗಪಡಿಸಿದ್ದಾರೆ. ಅವರನ್ನು ಹತ್ಯೆಗೈಯ್ಯಲು ಬೇಕಾದ ಮಾಮೂಲು ಪೂರ್ವಭಾವಿ ಸಿದ್ಧತೆಯನ್ನೂ ಆಡಳಿತ ವ್ಯವಸ್ಥೆ ಮಾಡಿಮುಗಿಸಿದೆ. ಅರ್ಥಾತ್, ಸೋಲಂಕಿಯವರಿಗೆ ಕಲ್ಪಿಸಲಾಗಿದ್ದ ಸರಕಾರಿ ಭದ್ರತೆಯನ್ನು ವಾಪಸು ಪಡೆಯಲಾಗಿದೆ.ಹೀಗಾಗಿ ಅವರು ಸಾಕ್ಷ ನುಡಿಯಲು ನ್ಯಾಯಾಲಯಕ್ಕೆ ಹಾಜರಾಗದೆ ಹಿಂಜರಿಯುತ್ತಿದ್ದಾರೆ. 2014ರ ಎಪ್ರಿಲ್ 1ರಂದು ನ್ಯಾಯಮೂರ್ತಿ ಡಾ.ಲೋಹಿಯಾ ಅವರನ್ನು ಹತ್ಯೆಗೈಯ್ಯುವ ಒಂದು ವಾರದ ಹಿಂದೆ ಅವರಿಗೆ ಕಲ್ಪಿಸಲಾಗಿದ್ದ ಸರಕಾರಿ ಭದ್ರತೆಯನ್ನು ಹಿಂತೆಗೆಯಲಾಗಿತ್ತು. ಇದು ಕೇವಲ ಸೋಲಂಕಿ ಎದುರಿಸುತ್ತಿರುವ ಆತಂಕ ಮಾತ್ರವಲ್ಲ. ಮೋದಿ ಸರಕಾರವೆಂದರೆ ರಾಷ್ಟ್ರೀಯತೆ ಹಾಗೂ ಅದರ ವಿರುದ್ಧ ದನಿಯೆತ್ತುವವರನ್ನೆಲ್ಲ ಮುಗಿಸಿಬಿಡುವ ಅಘೋಷಿತ ಸರ್ವಾಧಿಕಾರಿ ಆಡಳಿತವು ಚಾಲ್ತಿಯಲ್ಲಿದೆ ಎಂಬುದು ವಾಸ್ತವ.

ಸಂವಿಧಾನವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸದೆಯೇ ಸರ್ವಾಧಿಕಾರವನ್ನು ಹೇರಲು ಸಾಧ್ಯವಿದೆ ಎಂಬುದನ್ನು ಮೋದಿ ಸರಕಾರ ಕಳೆದ 4 ವರ್ಷಗಳಿಂದ ಜಗತ್ತಿಗೆ ತೋರಿಸಿಕೊಟ್ಟಿದೆ. ಕಳೆದ ನಾಲ್ಕು ವರ್ಷ ಇಡೀ ಆಡಳಿತ ಯಂತ್ರವನ್ನು ಮೋದಿ ಸರಕಾರ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ. ಸಂವಿಧಾನದ ಮರೆಯಲ್ಲಿ ನಿಂತು ಸರ್ವಾಧಿಕಾರ ನಡೆಸುವ ಎಲ್ಲ ಪ್ರಯೋಗವನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ನ್ಯಾಯಾಧೀಶರಿಂದ ಹಿಂದುತ್ವದ ಪರ ತೀರ್ಪು ನೀಡುವ ಪ್ರಕರಣಗಳು, ಗೋ ಸಂರಕ್ಷಣೆಯ ಹೆಸರಿನಲ್ಲಿ ಒಂದೆಡೆ ಅಲ್ಪಸಂಖ್ಯಾತರನ್ನು ಗುಂಪು ಹತ್ಯೆ ನಡೆಸಿದರೆ, ಇನ್ನೊಂದೆಡೆ ಅದೇ ಗೋಹತ್ಯೆಯ ಮೂಲಕ ತನ್ನವರ ಖಜಾನೆಗೆ ಕೋಟಿ ರೂಪಾಯಿ ಆದಾಯ ಬಾಚಿಕೊಳ್ಳುವ ತಂತ್ರಗಾರಿಕೆ; ಚುನಾವಣೆ ಇಲ್ಲದೆಯೇ ಗೆಲುವು ಸಾಧಿಸುವ ಬೆದರಿಕೆಯ ತಂತ್ರ, ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ತನ್ನ ಖಾಸಗಿ ಸೊತ್ತಿನಂತೆ ಬಳಸಿಕೊಂಡ ರೀತಿ; ದಿನಬಳಕೆಯ ವಸ್ತು ಮತ್ತು ತೈಲ ಬೆಲೆ ಗಗನಕ್ಕೇರಿದರೂ ಅದು ಸಾರ್ವಜನಿಕ ಪ್ರತಿಭಟನೆಯ ವಸ್ತುವಾಗದಂತೆ ನೋಡಿಕೊಂಡ ಬಿಜೆಪಿಯ ರಾಷ್ಟ್ರೀಯತೆ; ಸಮಾಜದಲ್ಲಿ ತನ್ನ ವಿಧೇಯಕ ವರ್ಗವನ್ನು ಸಷ್ಟಿಸುವುದಕ್ಕಾಗಿಯೇ ಮನುವಾದ ಪ್ರೇರಿತ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಹೊರಟಿರುವ ಸರಕಾರದ ಕ್ರಮ, ಇಂತಹ ಸುಪ್ತ ಹಿಂದುತ್ವ ಅಜೆಂಡಾಗಳನ್ನು ಗುರುತಿಸಿ ಅವುಗಳನ್ನು ಸಮಾಜದ ಮುಂದೆ ಬಹಿರಂಗಗೊಳಿಸುವ ಪ್ರಗತಿಪರ ಚಿಂತಕರ ಹತ್ಯೆ, ಬಂಧನ…ಇವೆಲ್ಲವೂ ಸರ್ವಾಧಿಕಾರದ ಆಡಳಿತ ವೈಖರಿಯ ಗುಣಲಕ್ಷಣಗಳು. ಈ ಎಲ್ಲ ಗುಣಲಕ್ಷಣಗಳು ಪ್ರಸಕ್ತ ಚಾಲ್ತಿಯಲ್ಲಿರುವುದರಿಂದ ಪ್ರಜಾಪ್ರಭುತ್ವ ಅಪಾಯಕಾರಿ ಮಟ್ಟದಲ್ಲಿ ದುರ್ಬಲಗೊಳ್ಳುತ್ತಿದೆ ಎಂಬುದನ್ನು ಮನಗಾಣಬಹುದು.

ದೇಶದಲ್ಲಿ ಈಗ ಸುದ್ದಿಯಲ್ಲಿರುವ ರಫೇಲ್ ಹಗರಣವು ಮೋದಿ ಸರಕಾರದ ಭ್ರಷ್ಟಾಚಾರದ ಪ್ರಕರಣವಾಗಿ ಮಾತ್ರ ಪರಿಗಣಿಸಲ್ಪಡುತ್ತಿದೆ. ವಾಸ್ತವದಲ್ಲಿ ದೇಶದ ಭದ್ರತೆಗೆ ಕಂಟಕವಾಗಿರುವ ಸರ್ವಾಧಿಕಾರಿ ನಿಲುವಿನ ಪ್ರಕರಣವಾಗಿದೆ ರಫೇಲ್ ಹಗರಣ. ಪ್ರಜಾತಂತ್ರದ ಹಗಲು ವೇಷ ತೊಟ್ಟ ಸರ್ವಾಧಿಕಾರವು ಜಾರಿಯಲ್ಲಿದೆ. ಇತ್ತೀಚೆಗಿನ ತ್ರಿಪುರಾ ಪಂಚಾಯತ್ ಚುನಾವಣೆ ಇದಕ್ಕೊಂದು ಜ್ವಲಂತ ಉದಾಹರಣೆ. ಸುಮಾರು 336 ಗ್ರಾಮ ಪಂಚಾಯತ್ ಸೀಟುಗಳ ಪೈಕಿ 327 ಸೀಟುಗಳನ್ನು ಬಿಜೆಪಿ ಅವಿರೋಧವಾಗಿ ವಶಪಡಿಸಿಕೊಂಡಿತ್ತು. ಅಂದರೆ ಪ್ರಜಾಪ್ರಭುತ್ವವನ್ನು ನಿರೂಪಿಸುವ ಮತ್ತು ಖಾತರಿಪಡಿಸುವ ವ್ಯವಸ್ಥೆಯ ಒಂದು ಭಾಗವಾಗಿದೆ ಚುನಾವಣೆ. ಆದರೆ ತ್ರಿಪುರಾದಲ್ಲಿ ಬಿಜೆಪಿಯ ವಿರುದ್ಧ ಯಾರೂ ಚುನಾವಣೆಗೆ ನಾಮಪತ್ರ ಸಲ್ಲಿಸದಂತೆ ಬೆದರಿಕೆಯೊಡ್ಡಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಒಂದು ವಿಚಾರವಂತೂ ಸ್ಪಷ್ಟ; ದೇಶದಲ್ಲಿ ಬೆದರಿಕೆ ಎದುರಿಸುತ್ತಿರುವುದು ವ್ಯಕ್ತಿ, ಸಂಘಟನೆ ಮಾತ್ರವಲ್ಲ; ಸಂವಿಧಾನ ಮತ್ತು ಪ್ರಜಾತಂತ್ರ ವ್ಯವಸ್ಥೆಯೂ ಗಂಭೀರ ಆತಂಕವನ್ನು ಎದುರಿಸುತ್ತಿದೆ. ಚರಿತ್ರೆಯಲ್ಲಿ ಎಲ್ಲೂ ಸರ್ವಾಧಿಕಾರವು ಹೆಚ್ಚು ಕಾಲ ಬಾಳಿದ ಉದಾಹರಣೆಗಳಿಲ್ಲ. ಅಂತಹ ಸಂದರ್ಭಗಳಲ್ಲೆಲ್ಲಾ ಜನಾಂದೋಲನವು ರೂಪುಗೊಂಡು ಸರ್ವಾಧಿಕಾರವನ್ನು ಕೊನೆಗೊಳಿಸಿದ ಇತಿಹಾಸ ಸಾಕಷ್ಟಿದೆ. ಭಾರತದಲ್ಲೂ ಇತಿಹಾಸ ಮರುಕಳಿಸುವ ದಿನಗಳು ದೂರವಿಲ್ಲ.