ಬಾಗ್ದಾದ್: ಮದುವೆ ಹಾಲ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 100 ಮಂದಿ ಸಾವನ್ನಪ್ಪಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಉತ್ತರ ಇರಾಕ್‍ನಲ್ಲಿ ನಡೆದಿದೆ.
ಇರಾಕ್‍ನ ನಿನೆವೆ ಪ್ರಾಂತ್ಯದ ಹಮ್ದನಿಯಾ ಪ್ರದೇಶದಲ್ಲಿ ಬೆಂಕಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಪ್ರಧಾನವಾಗಿ ಕ್ರಿಶ್ಚಿಯನ್ ಪ್ರದೇಶವಾಗಿದ್ದು, ಮೊಸುಲ್ ನಗರದ ಹೊರಗೆ ರಾಜಧಾನಿ ಬಾಗ್ದಾದ್‍ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ (205 ಮೈಲುಗಳು) ದೂರದಲ್ಲಿದೆ.
ಈ ಎಲ್ಲಾ ದೃಶ್ಯಗಳು ಹಾಲ್‍ನಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಗಾಯಗೊಂಡವರಲ್ಲಿ ಕೆಲವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ನಿನೆವೆ ಪ್ರಾಂತೀಯ ಗವರ್ನರ್ ನಜೀಮ್ ಅಲ್-ಜುಬೌರಿ ಹೇಳಿದ್ದಾರೆ.
ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಪಟಾಕಿಯಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.