ಟ್ರಾಕ್ಟರ್ ಚಾಲಕನ ಮೇಲೆ ಹಲ್ಲೆ ಪ್ರಕರಣ: PSI ಮಣಿಕಂಠ ಸಸ್ಪೆಂಡ್

Prasthutha|

ರಾಯಚೂರು: ಟ್ರಾಕ್ಟರ್ ಚಾಲಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸ್ಕಿ ಪೊಲೀಸ್​ ಠಾಣೆ ಪಿಎಸ್​​ಐ ಮಣಿಕಂಠ ಅವರನ್ನು ಅಮಾನತು ಮಾಡಲಾಗಿದೆ.

- Advertisement -

ಬಳ್ಳಾರಿ ವಲಯದ ಐಜಿ ಲೋಕೇಶ್ ಕುಮಾರ್ ಅವರು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಅಕ್ರಮ ಮರಳು ಸಾಗಾಟ ಆರೋಪದ ಮೇಲೆ ಟ್ರ್ಯಾಕ್ಟರ್​ ಚಾಲಕ ನಿರುಪಾದಿ ಎನ್ನುವರಿಗೆ ಮನಬಂದಂತೆ ಬಾಸುಂಡೆ ಬರುವಂತೆ ಥಳಿಸಿದ್ದರು. ಈ ಬಗ್ಗೆ ನಿರುಪಾದಿ ಪತ್ನಿ ಲಕ್ಷ್ಮೀ ನೀಡಿದ್ದ ದೂರಿನ ಅನ್ವಯ ಮಣಿಕಂಠ ವಿರುದ್ಧ ಮಸ್ಕಿ ಠಾಣೆಯಲ್ಲೇ ಎಫ್​ಐಆರ್ ದಾಖಲಾಗಿತ್ತು. ಅಲ್ಲದೇ ವಾಲ್ಮೀಕಿ ಸಂಘ, ಮಣಿಕಂಠ ಅವರನ್ನು ಅಮಾನತು ಮಾಡುವಂತೆ ಠಾಣೆ ಮುಂದೆ ಪ್ರತಿಭಟನೆ ಮಾಡಿತ್ತು. ಇದೀಗ ಈ ಪ್ರಕರಣದಲ್ಲಿ ಪಿಎಸ್​ಐ ಮಣಿಕಂಠ ಅವರನ್ನು ಅಮಾನತು ಮಾಡಲಾಗಿದೆ.

ಸೆಪ್ಟೆಂಬರ್ 20 ರಂದು ಮಸ್ಕಿ ಪಟ್ಟಣದಲ್ಲಿ ನಿರುಪಾದಿ ಎಂಬುವರು ಟ್ರ್ಯಾಕ್ಟರ್​ನಲ್ಲಿ ಮರಳು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪಿಎಸ್​ಐ ಮಣಿಕಂಠ ಟ್ರ್ಯಾಕ್ಟರ್ ತಡೆದು ಮರಳು ತೆಗೆದುಕೊಂಡು ಹೋಗಲು 20 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ ತನ್ನ ಜೀಪ್​ನಲ್ಲಿದ್ದ ಪೈಪ್ ತೆಗೆದುಕೊಂಡು ನಿರುಪಾದಿ ಅವರಿಗೆ ಮನಬಂದಂತೆ ಥಳಿಸಿದ್ದರು. ಹಾಗೇ ಪಿಎಸ್​ಐ ಮಣಿಕಂಠ ಜಾತಿ ನಿಂದನೆ ಮಾಡಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ಹಲ್ಲೆ, ಬೆದರಿಕೆ, ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿತ್ತು.

- Advertisement -

ಈ ಸಂಬಂಧ ವಾಲ್ಮೀಕಿ ನಾಯಕ ಮಾಹಾಸಭಾ ತಾಲೂಕು ಘಟಕವು ಪಿಎಸ್​ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಲಿಂಗಸೂರು ಡಿವೈಎಸ್​​ಪಿ ಮಂಜುನಾಥ ಹಾಗೂ ಸಿಪಿಐ ಬಾಲಚಂದ್ರ ಲಕ್ಕಂ ಅವರಿಗೆ ಮನವಿ ಸಲ್ಲಿಸಿದ್ದರು.



Join Whatsapp