ಹೊಸದಿಲ್ಲಿ: ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ.
ಈ ಬಾರಿಯೂ ಪಕ್ಷ 39 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಬಿಜೆಪಿಯ ಈ ಪಟ್ಟಿಯಲ್ಲಿ ಹಲವು ಅಚ್ಚರಿಯ ಹೆಸರುಗಳು ಹೊರಹೊಮ್ಮಿವೆ. ವಿಧಾನಸಭೆ ಚುನಾವಣೆಗೆ ಕೇಂದ್ರ ಸಚಿವರು ಮತ್ತು ಸಂಸದರನ್ನು ಪಕ್ಷವು ತನ್ನ ಅಭ್ಯರ್ಥಿಗಳನ್ನಾಗಿ ಮಾಡಿದ್ದು, ಅದರಲ್ಲಿ ಮೂವರು ಕೇಂದ್ರ ಸಚಿವರಿಗೆ ಟಿಕೆಟ್ ನೀಡಿದೆ. ಇದಲ್ಲದೇ ಇನ್ನೂ 4 ಸಂಸದರನ್ನು ಕಣಕ್ಕಿಳಿಸಲಾಗಿದೆ. ಒಟ್ಟು 7 ಸಂಸದರಿಗೆ ಟಿಕೆಟ್ ನೀಡಲಾಗಿದೆ.
ಎರಡನೇ ಪಟ್ಟಿಯಲ್ಲಿ 39 ಮಂದಿ ಪೈಕಿ 6 ಮಂದಿ ಮಹಿಳೆಯರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದೇ ವೇಳೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಪ್ತರಾಗಿರುವ ಇಮಾರ್ತಿ ದೇವಿ ಅವರಿಗೂ ಟಿಕೆಟ್ ಸಿಕ್ಕಿದೆ. ದಾಬ್ರಾ ವಿಧಾನಸಭಾ ಕ್ಷೇತ್ರದಿಂದ ನಡೆದ ಉಪಚುನಾವಣೆಯಲ್ಲಿ ಅವರು ಸೋತಿದ್ದರು. ‘ಇಂದೋರ್ 1’ ಕ್ಷೇತ್ರದಿಂದ ಕೈಲಾಶ್ ವಿಜಯವರ್ಗಿಯಾ ಅವರನ್ನು ಕಣಕ್ಕಿಳಿಸಲಾಗಿದೆ.
ಕೈಲಾಶ್ ವಿಜಯವರ್ಗಿಯ ಅವರ ಮಗ ಆಕಾಶ್ ವಿಹವರ್ಗಿಯ ‘ಇಂದೋರ್ 3’ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಸಂಸದ ಗಣೇಶ್ ಮಂತ್ರಿ, ಸಂಸದ ರಾಕೇಶ್ ಸಿಂಗ್ ಮತ್ತು ಸಂಸದೆ ರೀತಿ ಪಾಠಕ್ ಅವರಿಗೂ ಟಿಕೆಟ್ ನೀಡಲಾಗಿದೆ. ವಿವೇಕ್ ಬಂಟಿ ಸಾಹು ಅವರನ್ನು ಕಮಲ್ ನಾಥ್ ವಿರುದ್ಧ ಚಿಂದ್ವಾರದಿಂದ ಕಣಕ್ಕಿಳಿಸಲಾಗಿದೆ. ಈ ಹಿಂದೆ ಬಿಜೆಪಿ ಮೊದಲ ಪಟ್ಟಿಯಲ್ಲಿ 39 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಇದುವರೆಗೆ ಮಧ್ಯಪ್ರದೇಶದ 230 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 76 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಕೇಂದ್ರ ಸಚಿವರು ಮತ್ತು ಸಂಸದರಿಗೆ ಬಿಜೆಪಿ ಟಿಕೆಟ್
ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್
ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್
ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಸ್ತೆ
ಸಂಸದ ಗಣೇಶ್ ಸಿಂಗ್
ಸಂಸದ ರಾಕೇಶ್ ಸಿಂಗ್
ಸಂಸದೆ ರೀತಿ ಪಾಠಕ್
ಸಂಸದ ಉದಯ್ ಪ್ರತಾಪ್ ಸಿಂಗ್