ಬೆಂಗಳೂರು: ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಗೆ ಜೀವ ಬೆದರಿಕೆ ಹಾಕಿದ್ದ ಯೂಟ್ಯೂಬ್ ವಾಹಿನಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇತ್ತೀಚೆಗೆ ಖ್ಯಾತ ಯೂಟ್ಯೂಬ್ ವಾಹಿನಿಯಲ್ಲಿ ಪ್ರಕಾಶ್ ರಾಜ್ ವಿರುದ್ಧ ಜೀವ ಬೆದರಿಕೆ ಹಾಕುವಂತಹ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಪ್ರಕಾಶ್ ರಾಜ್ ದೂರು ನೀಡಿದ್ದರು. ಈಗ ಆ ಯೂಟ್ಯೂಬ್ ವಾಹಿನಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್ 506, 504, 505(2) ಸೆಕ್ಷನ್ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮಾಡಲಾಗುತ್ತಿದೆ. ಯೂಟ್ಯೂಬ್ ಚಾನೆಲ್ನಲ್ಲಿ ಆಗಸ್ಟ್ 14ರಂದು ಜೀವ ಬೆದರಿಕೆ ಹಾಕುವ ಸಂದೇಶದ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಅಪ್ಲೋಡ್ ಮಾಡಿರುವ 2 ವಿಡಿಯೋಗಳಲ್ಲೂ ಬೆದರಿಕೆ ಹಾಕಲಾಗಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದ್ದಾರೆ.
ಪ್ರಕಾಶ್ ರಾಜ್ ಮಾತ್ರವಲ್ಲದೇ ಅವರ ಕುಟುಂಬದವರಿಗೂ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಯೂಟ್ಯೂಬ್ ವಾಹಿನಿ ವಿರುದ್ಧ ದೂರು ನೀಡಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಪ್ರಕಾಶ್ ರಾಜ್ ನೀಡಿದ ದೂರಿನ ಅನ್ವಯ ಯೂಟ್ಯೂಬ್ ವಾಹಿನಿಯ ಮುಖ್ಯಸ್ಥ ಮತ್ತು ಸಿಬ್ಬಂದಿ ವಿರುದ್ಧ ಅಶೋಕ ನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಸದ್ಯ ತನಿಖೆ ಆರಂಭ ಆಗಿದೆ.