ಬೆಂಗಳೂರು: ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಸ್ಥಾಪಿಸುವಂತೆ ಮನವಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಏಮ್ಸ್ ಸ್ಥಾಪನೆ ವಿಚಾರವಾಗಿ ಸಿದ್ದರಾಮಯ್ಯ ಬರೆದಿರುವ ಎರಡನೇ ಪತ್ರ ಇದಾಗಿದೆ. ಈ ಹಿಂದೆ ಜೂನ್ನಲ್ಲಿ ಪತ್ರ ಬರೆದಿದ್ದರು. ಏಮ್ಸ್ ಸ್ಥಾಪನೆ ವಿಚಾರವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಶಾಸಕರ ನಿಯೋಗವು ಕಳೆದ ತಿಂಗಳು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿ ಮಾಡಿತ್ತು.
ಸಿದ್ದರಾಮಯ್ಯ ಅವರು ಪತ್ರ ಬರೆದ ವಿಚಾರವಾಗಿ ಮುಖ್ಯಮಂತ್ರಿಗಳ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆರೋಗ್ಯ ವ್ಯವಸ್ಥೆ ಬಲಗೊಳ್ಳಲಿದೆ ಎಂದು ಅದು ಉಲ್ಲೇಖಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಎಐಐಎಂಎಸ್ ಸ್ಥಾಪನೆಗೆ 2015 ರಿಂದಲೇ ಬೇಡಿಕೆ ಇದೆ ಆದರೆ ಈ ವಿಷಯದಲ್ಲಿ ಯಾವುದೇ ಪ್ರಗತಿಯಾಗಿಲ್ಲ. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಎನ್ಎಸ್ ಬೋಸರಾಜು, ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದ ನಿಯೋಗವು ಈ ಭಾಗದ ಶಾಸಕರು ಮತ್ತು ಸಂಸದರೊಂದಿಗೆ ಮಾಂಡವೀಯರನ್ನು ಭೇಟಿ ಮಾಡಿ ಯೋಜನೆಗೆ ಅನುಮೋದನೆ ನೀಡುವಂತೆ ಈಗಾಗಲೇ ಮನವಿ ಮಾಡಿದೆ. ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಆಗ್ರಹಿಸಿ ಈ ಹಿಂದೆ ಅನೇಕ ಹೋರಾಟ, ಪ್ರತಿಭಟನೆ, ಧರಣಿಗಳೂ ನಡೆದಿತ್ತು.