ಬೆಂಗಳೂರು: ನಾನು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿಲ್ಲ. ಸರ್ವಪಲ್ಲಿ ರಾಧಾಕೃಷ್ಣನ್ ಮಾತನ್ನ ಉಲ್ಲೇಖಿಸಿದ್ದಕ್ಕೆ ಬಿಜೆಪಿ ಬೊಬ್ಬೆ ಹಾಕುತ್ತಿದೆ. ಹಿಂದೂ ಧರ್ಮದ ಮೇಲೆ ನಮಗೆ ಗೌರವವಿದೆ, ಬಿಜೆಪಿಗೆ ಇದೆಯಾ? ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಪ್ರಶ್ನಿಸಿದ್ದಾರೆ.
ಹಿಂದೂ ಧರ್ಮದ ಬಗ್ಗೆ ನಾನು ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಹಿಂದೂ ಧರ್ಮವನ್ನು ಬೇರೆ ರೀತಿ ಅರ್ಥೈಸುವ ಕೆಲಸ ನಾನು ಮಾಡಿಲ್ಲ. ನಾವೆಲ್ಲಾ ಹಿಂದೂಗಳು, ಬೆಳಗ್ಗೆ ಎದ್ದರೆ ಗಣಪತಿಗೆ ಪ್ರಾರ್ಥಿಸುತ್ತೇನೆ. ನಾನು ಬೆಳಗ್ಗೆ ಎದ್ದ ಕೂಡಲೇ ಲಕ್ಷ್ಮೀ ಶ್ಲೋಕ ಹೇಳುತ್ತೇನೆ. ರಾತ್ರಿ ಮಲಗುವ ಮುಂಚೆ ಹನುಮನ ಶ್ಲೋಕ ಹೇಳುತ್ತೇನೆ ಎಂದು ಹೇಳಿ ಎರಡು ಶ್ಲೋಕಗಳನ್ನು ಹೇಳಿದರು. ತಾನು ಹೇಳಿದ ಈ ಶ್ಲೋಕ ಬಿಜೆಪಿ ನಾಯಕರಿಗೆ ಹೇಳಲು ಬರುವುದಿಲ್ಲ. ಶ್ಲೋಕ ಹೇಳುತ್ತಾ ಅಂತ ಬಿಜೆಪಿಯವರಿಗೆ ಕೇಳಿ ನೋಡಿ ಎಂದರಲ್ಲದೆ, ಶ್ಲೋಕ ಹೇಳುವಂತೆ ಸವಾಲೂ ಹಾಕಿದರು. ಹಿಂದೂ ಧರ್ಮ ಯಾವಾಗ ಹುಟ್ಟಿತು ಎಂದು ನಾನು ಪ್ರಶ್ನೆ ಮಾಡಿಲ್ಲ. ನಾನು ಸರ್ವಪಲ್ಲಿ ರಾಧಾಕೃಷ್ಣನ್ ವಿಚಾರದ ಬಗ್ಗೆ ಮಾತಾಡಿದ್ದು. ಜೈನ, ಬುದ್ಧ, ಮುಸ್ಲಿಂ ಧರ್ಮಕ್ಕೆ ಸ್ಥಾಪಕರು ಇದ್ದಾರೆ. ಆದರೆ ಹಿಂದೂ ಧರ್ಮಕ್ಕೆ ಸ್ಥಾಪಕರು ಇಲ್ಲ ಎಂದು ಹೇಳಿದ್ದಾಗಿ ತಿಳಿದರು.