ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆಗಳ ವಿಭಾಗದ ಜಂಟಿ ನಿರ್ದೇಶಕ ಕೆ.ವಿ. ಜಯರಾಮ್ ಅವರ ಬಿಜೈ ನಿವಾಸದ ಮೇಲೆ ಮಂಗಳವಾರ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲಿಸಿದ್ದಾರೆ.
ನಗರದ ಪಡೀಲ್ ಬಳಿಯಿರುವ ಜಯರಾಮ್ ತಂದೆಯ ಮನೆ, ಕೇರಳದಲ್ಲಿರುವ ಜಯರಾಮ್ ಪತ್ನಿಯ ಮನೆ ಮೇಲೂ ದಾಳಿ ನಡೆದಿದೆ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಎಸಿಬಿ ಎಸ್ಪಿ ಬೋಪಯ್ಯ, ಡಿವೈಎಸ್ಪಿ ಕೆ.ಸಿ. ಪ್ರಕಾಶ್, ಇನ್ಸ್ ಪೆಕ್ಟರ್ ಗಳಾದ ಶ್ಯಾಮ್ ಸುಂದರ್, ಗುರುರಾಜ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಕೆಲಸವೊಂದನ್ನು ಮಾಡಿಕೊಡಲು ಲಂಚ ಬೇಡಿಕೆ ಇಟ್ಟ ಆರೋಪದಲ್ಲಿ ಜಯರಾಮ್ ವಿರುದ್ಧ ಸಂತ್ರಸ್ತರೊಬ್ಬರು ಎಸಿಬಿಯಲ್ಲಿ ಈ ಹಿಂದೆ ದೂರು ದಾಖಲಿಸಿದ್ದರು. ಆದರೆ, ಪ್ರಕರಣದ ಬೆನ್ನು ಬಿದ್ದಿದ್ದ ಎಸಿಬಿ ಅಧಿಕಾರಿಗಳಿಗೆ ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಇಂದಿನ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿ ವೇಳೆ ಮಹತ್ವದ ದಾಖಲೆಗಳು ದೊರೆತಿವೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ 30 ಕಡೆ ದಾಳಿ : ಇಂದು ಬೆಳ್ಳಂಬೆಳಗ್ಗೆ ಎಸಿಬಿ ತಂಡ ರಾಜ್ಯದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿ, ಏಳು ಅಧಿಕಾರಿಗಳಿಗೆ ಸಂಬಂಧಿಸಿದ 30 ಸ್ಥಳಗಳಿಗೆ ದಾಳಿ ನಡೆಸಿದ್ದಾರೆ. ಬೆಂಗಳೂರು ನಗರ, ಬಳ್ಳಾರಿ, ಕೋಲಾರ, ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ ಮತ್ತು ಕಲಬುರಗಿಯಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಏಕ ಕಾಲಕ್ಕೆ ಎಸಿಬಿ ದಾಳಿ ನಡೆಸಿದೆ.