ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ನಿಷೇಧ ಹೇರಿದ ರಷ್ಯಾ

Prasthutha|

ಮಾಸ್ಕೋ: ರಷ್ಯಾ ದೇಶದಲ್ಲಿ ಲಿಂಗ ಪರಿವರ್ತನೆಗೆ ಶಸ್ತ್ರಚಿಕಿತ್ಸೆ ಮಾಡಿಸುವುದನ್ನು ನಿಷೇಧಿಸುವ ಕಾನೂನಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸಹಿ ಹಾಕಿದ್ದಾರೆ.

- Advertisement -

ಲಿಂಗ ಪರಿವರ್ತನೆಗೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸೆಗಳನ್ನು ಕಾನೂನುಬಾಹಿರಗೊಳಿಸುವ ಕಾನೂನಿಗೆ ಇದು ಪೂರಕವಾಗಿದೆ. ಮಕ್ಕಳ ಅಸಮರ್ಪಕ ಬೆಳವಣಿಗೆ ಮತ್ತು ಜನ್ಮ ದೋಷಗಳನ್ನು ಪರಿಹರಿಸಲು ಬಳಸುವ ವೈದ್ಯಕೀಯ ವಿಧಾನಗಳಿಗೆ ನಿರ್ಬಂಧವು ಅನ್ವಯಿಸುವುದಿಲ್ಲ. ಹಾಗೆಯೇ ಲೈಂಗಿಕ ವ್ಯತ್ಯಾಸದ ಬಾಲ್ಯದ ಅಸ್ವಸ್ಥತೆಗಳಿಗೆ ಸಂಬಂಧಿಸಿದ ಆನುವಂಶಿಕ ಮತ್ತು ಅಂತಃಸ್ರಾವಕ ಸಮಸ್ಯೆಗಳಿಗೆ ಅನ್ವಯಿಸುವುದಿಲ್ಲ ಎಂದು ರಷ್ಯಾದ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಕಾನೂನಿನ ಮುಖ್ಯ ಗುರಿಯು, ರಷ್ಯಾ ಸಮಾಜದ ಸಾಂವಿಧಾನಿಕ ನೈತಿಕ ತತ್ವಗಳು ಮತ್ತು ಕೌಟುಂಬಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು. ದೇಶದ ಜನರ ಆರೋಗ್ಯವನ್ನು, ಅದರಲ್ಲೂ ವಿಶೇಷವಾಗಿ ಮಕ್ಕಳ ಆರೋಗ್ಯವನ್ನು ಕಾಪಾಡುವುದಾಗಿದೆ ಎನ್ನಲಾಗಿದೆ.

- Advertisement -

ಈ ಕಾನೂನು ಅಂಗೀಕಾರವಾದ ದಿನದಿಂದಲೇ ಜಾರಿಗೆ ಬರುತ್ತದೆ. ಈಗಾಗಲೇ ಲಿಂಗ ಬದಲಾಯಿಸಿಕೊಂಡಿರುವವರಿಗೆ ಈ ಕಾನೂನು ಅನ್ವಯವಾಗುವುದಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ರಷ್ಯಾದಲ್ಲಿ ಹೊಸ LGBTQ ವಿರೋಧಿ ಕಾನೂನುಗಳ ಭಾಗವಾಗಿ ಲಿಂಗ ಪರಿವರ್ತನೆಗೆ ಶಸ್ತ್ರಚಿಕಿತ್ಸೆ ಸೇರಿದಂತೆ ತೃತೀಯಲಿಂಗಿಗಳಿಗೆ ಎಲ್ಲಾ ವೈದ್ಯಕೀಯ ಸಹಾಯವನ್ನು ನಿಷೇಧಿಸುವ ಹೊಸ ಕಾನೂನನ್ನು ರಷ್ಯಾದ ಸ್ಟೇಟ್ ಡುಮಾ ಅಥವಾ ಸಂಸತ್ತಿನ ಕೆಳಮನೆಯು ಜು.14 ರಂದು ಅನುಮೋದಿಸಿತು.

ರಷ್ಯಾದಲ್ಲಿನ ಇತ್ತೀಚಿನ ಕಾನೂನು ಬೆಳವಣಿಗೆಗಳು LGBTQ ಸಮುದಾಯದ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುತ್ತಿವೆ. ದೇಶದ ನಿಯಮಗಳ ಬಿಗಿಗೊಳಿಸುವಿಕೆ ಮತ್ತು ತೃತೀಯಲಿಂಗಿಗಳ ಹಕ್ಕುಗಳ ಮೇಲೆ ನಿಯಂತ್ರಣ ಸಾಧಿಸಲಾಗುತ್ತಿದೆ ಎನ್ನಲಾಗುತ್ತಿದೆ.



Join Whatsapp