ಗೃಹ ಲಕ್ಷ್ಮೀ ಯೋಜನೆ ಅರ್ಜಿಗೆ ಜನರಿಂದ ಹಣ ವಸೂಲಿ, 3 ಸೈಬರ್ ಸೆಂಟರ್​ಗಳ ವಿರುದ್ಧ ಎಫ್​ಐಆರ್ ದಾಖಲು

Prasthutha|

- Advertisement -

ರಾಯಚೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆಯ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ‘ಗೃಹಲಕ್ಷ್ಮಿ’ ಯೋಜನೆ ಜಾರಿಯಾಗಿದೆ.

ಮನೆ ಯಜಮಾನಿಗೆ ಮಾಸಿಕ 2000 ನೀಡುವ ಈ ‘ಗೃಹಲಕ್ಷ್ಮಿ’ ಯೋಜನೆಗೆ ಆನ್​ಲೈನ್​ ಮೂಲಕ ಈಗಾಗಲೇ ನೋಂದಣಿ ಪ್ರಕ್ರಿಯೆ ಶುರುವಾಗಿದ್ದು, ಅರ್ಜಿ ಸಲ್ಲಿಕೆಗೆ ಯಾವುದೇ ಹಣ ಪಡೆಯುವಂತಿಲ್ಲ ಎಂದು ಸರ್ಕಾರವೇ ಹೇಳಿದೆ.

- Advertisement -

ಆದರೂ ಖಾಸಗಿ ಸೈಬರ್ ಸೆಂಟರ್​ಗಳು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿವೆ. ಅದರಂತೆ ರಾಯಚೂರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಮೂರು ಸೈಬರ್ ಕೇಂದ್ರಗಳ ವಿರುದ್ಧ ದಾಖಲಾಗಿದೆ.

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಗ್ರಾಹಕರಿಂದ 100-200 ರೂ. ವಸೂಲಿ ಮಾಡುತ್ತಿದ್ದ ರಾಯಚೂರು ಜಿಲ್ಲೆ ಮಾನ್ವಿಯ 3 ಸೈಬರ್ ಕೇಂದ್ರಗಳ ವಿರುದ್ಧ ದೂರು ದಾಖಲಾಗಿದೆ. ಹಣ ವಸೂಲಿ ಮಾಡುತ್ತಿದ್ದ ಮಾಹಿತಿ ಮೇರೆಗೆ ಮಾನ್ವಿ ತಹಶೀಲ್ದಾರ್ ಚಂದ್ರಕಾಂತ್ ಅವರು ಸೈಬರ್​ ಸೆಂಟರ್​ಗಳ ಮೇಲೆ ದಾಳಿ ಮಾಡಿದ್ದು, ಈ ವೇಳೆ ಅಧಿಕೃತ ಸರ್ಕಾರಿ ಐಡಿಯನ್ನ ಅಕ್ರಮವಾಗಿ ಪಡೆದು ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಅರ್ಜಿ ಸಲ್ಲಿಕೆ ಮಾಡುತ್ತಿರುವುದು ಪತ್ತೆಯಾಗಿದೆ.

ಎಕ್ಸೆಲ್ ಕಂಪ್ಯೂಟರ್, ಲಕ್ಷ್ಮೀ ಕಂಪ್ಯೂಟರ್, ಸೂರ್ಯ ಕಂಪ್ಯೂಟರ್​ ಸೆಂಟರ್​ನಲ್ಲಿ ಫಲಾನುಭವಿಗಳಿಂದ ಹಣ ವಸೂಲ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಂದ್ರಕಾಂತ್ ಅವರು ನಗರದ ಮೂರು ಸೈಬರ್ ಸೆಂಟರ್​ ವಿರುದ್ಧ ಮಾನ್ವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇವರ ದೂರಿನ ಮೇರೆಗೆ ಪೊಲೀಸರು, ಐಟಿ ಆಕ್ಟ್ ಹಾಗೂ ಐಪಿಸಿ ಸೆಕ್ಷನ್ 420 ವಂಚನೆ ಆರೋಪದಡಿ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

ಗೃಹ ಲಕ್ಷ್ಮೀ ಯೋಜನೆಗೆ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಗಂಭೀರವಾಗಿ ಪರಿಗಣಿಸಿದ್ದು, ಹಣ ಪಡೆದುಕೊಂಡರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಜೊತೆ ಐಡಿ ಕ್ಯಾನ್ಸಲ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದರೂ ಸಹ ಖಾಸಗಿ ಸೈಬರ್ ಸೆಂಟರ್​ಗಳು ಅಕ್ರಮವಾಗಿ ಐಡಿ ಪಡೆದುಕೊಂಡು ಸಾರ್ವಜನಿಕರಿಂದ ಹಣ ವಸೂಲಿಗೆ ಇಳಿದಿವೆ.



Join Whatsapp