ರಾಜ್ಯದಲ್ಲಿ ಮುಂದುವರೆದ ಮಳೆ: ನಾಲ್ವರು ಸಾವು

Prasthutha|

ಬೆಂಗಳೂರು: ರಾಜ್ಯದೆಲ್ಲೆಡೆ ಮಳೆ ಅಬ್ಬರ ಜೋರಾಗಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಸೋಮವಾರ ರಾಜ್ಯದಲ್ಲಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಳ್ಳಾಡಿಯ ಗೋಕುಲ ದಾಸ್ ಪ್ರಭು (53) ಸೋಮವಾರ ಕರ್ಕುಂಜೆಯ ತೋಟಿಗೆ ಬಿದ್ದು ಮೃತಪಟ್ಟಿದ್ದಾರೆ. ಹೆಬ್ರಿ ತಾಲೂಕು ಶೇಡಿಮನೆಯ ಬಡಬೈಲು ದರಕಾಶು ಎಂಬಲ್ಲಿ ಬಾಲಕಿ ರಚನಾ (12) ಭಾನುವಾರ ಹೊಳೆಗೆ ಬಿದ್ದು ಮೃತಪಟ್ಟಿದ್ದಾಳೆ.

- Advertisement -

ಭದ್ರಾವತಿಯ ಶರತ್ ಕುಮಾರ್ (23) ಎಂಬುವವರು ಬೈಂದೂರು ತಾಲೂಕಿನ ಕೊಲ್ಲೂರು ಬಳಿಯ ಅರಶಿನಗುಂಡಿ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಕೊಚ್ಚಿ ಹೋಗಿದ್ದಾರೆ. ಬಂಡೆಯ ತುದಿಯಲ್ಲಿ ನಿಂತು ಜಲಪಾತ ವೀಕ್ಷಣೆ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ. ಯುವಕನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಕಲಬುರಗಿ ಜಿಲ್ಲೆಯ ಜೀವರ್ಗಿ ತಾಲೂಕಿನ ಬಿರಾಳ(ಬಿ)ಯಲ್ಲಿ ಎರಡು ಅಂತಸ್ತಿನ ಮನೆ ಕುಸಿದು ಬಸಮ್ಮ ಬಸವರಾಜ (35) ಮೃತಪಟ್ಟಿದ್ದಾರೆ. ಮನೆಯಲ್ಲಿ ಬಸಮ್ಮ ಹಾಗೂ ಅವರ ಪುತ್ರಿ ಅಶ್ವಿನಿ ಇದ್ದರು. ಮನೆ ಕುಸಿಯುತ್ತಿರುವ ಸಪ್ಪಳ ಕೇಳುತ್ತಿದ್ದಂತೆಯೇ ಪುತ್ರಿ ಅಶ್ವಿನಿ ಓಡಿ ಹೊರಗೆ ಬಂದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.

Join Whatsapp