ಶಸ್ತ್ರಾಸ್ತ್ರ ಹಿಡಿದುಕೊಂಡು ಮಮತಾ ಮನೆಗೆ ನುಗ್ಗಲು ಯತ್ನ : ಆರೋಪಿ ಬಂಧನ

Prasthutha|

ಕೋಲ್ಕತ್ತಾ: ಶಸ್ತ್ರಾಸ್ತ್ರ ಹಾಗೂ ಮಾದಕ ವಸ್ತುಗಳೊಂದಿಗೆ ಬಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಕೋಲ್ಕತ್ತಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

- Advertisement -

ಮಮತಾ ಬ್ಯಾನರ್ಜಿ ಅವರ ಕಾಳಿಘಾಟ್‌ನಲ್ಲಿರುವ ನಿವಾಸಕ್ಕೆ ಕಾರಿನಲ್ಲಿ ಬಂದ ವ್ಯಕ್ತಿ ಶಸ್ತ್ರಾಸ್ತ್ರ ಹಾಗೂ ಮಾದಕವಸ್ತುಗಳೊಂದಿಗೆ ನುಗ್ಗಲು ಯತ್ನಿಸಿದ್ದಾನೆ. ಸದ್ಯ ಘಟನೆ ವೇಳೆ ಮಮತಾ ಬ್ಯಾನರ್ಜಿ ತಮ್ಮ ನಿವಾಸದಲ್ಲಿ ಇರಲಿಲ್ಲ. ತಕ್ಷಣ ಆತನನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ವ್ಯಕ್ತಿಯನ್ನು ಪೊಲೀಸರು ನೂರ್ ಆಲಂ ಎಂದು ಗುರುತಿಸಿದ್ದಾರೆ. ಆತ ಬ್ಯಾನರ್ಜಿ ನಿವಾಸಕ್ಕೆ ಕಪ್ಪು ಬಣ್ಣದ ಕಾರಿನಲ್ಲಿ ಬಂದಿದ್ದು, ಅದರಲ್ಲಿ ಪೊಲೀಸ್ ಎಂದು ಬರೆಯಲಾಗಿದ್ದ ಸ್ಟಿಕ್ಕರ್ ಅನ್ನು ಅಂಟಿಸಲಾಗಿತ್ತು. ಆತ ಕಪ್ಪು ಬಣ್ಣದ ಕೋಟ್ ಧರಿಸಿದ್ದ. ಮಮತಾ ನಿವಾಸದ ಬಳಿ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಆತನ ವಾಹನದಲ್ಲಿ ಶಸ್ತ್ರಾಸ್ತ್ರ ಹಾಗೂ ಮಾದಕ ವಸ್ತು ಇರುವುದು ಕಂಡುಬಂದಿದೆ.

- Advertisement -

ತಕ್ಷಣ ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಆತ ಮುಖ್ಯಮಂತ್ರಿಯನ್ನು ಭೇಟಿಯಾಗಲು ಬಯಸಿದ್ದಾಗಿ ತಿಳಿಸಿದ್ದಾನೆ. ಆತನ ಬಳಿ ಶಸ್ತ್ರಾಸ್ತ್ರ, ಮಾದಕ ವಸ್ತು, ಬಿಎಸ್‌ಎಫ್ ಹಾಗೂ ಇತರ ವಿವಿಧ ಏಜೆನ್ಸಿಗಳ ಹಲವಾರು ಗುರುತಿನ ಚೀಟಿಗಳು ಪತ್ತೆಯಾಗಿವೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆತನ ನಿಜ ಉದ್ದೇಶ ಏನೆಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.



Join Whatsapp