ವಿಶ್ವಕಪ್‌ ಪ್ರಶಸ್ತಿ ಮೊತ್ತ ಸಮಾನ: ICC ಯಿಂದ ಮಹತ್ವದ ತೀರ್ಮಾನ

Prasthutha|

ಡರ್ಬನ್‌ (ದಕ್ಷಿಣ ಆಫ್ರಿಕಾ): ಇನ್ನು ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ನಡೆಸುವ ಎಲ್ಲ ಕ್ರೀಡಾಕೂಟಗಳಲ್ಲಿ ಪುರುಷರಿಗೆ ಸಿಗುವಷ್ಟೇ ಪ್ರಶಸ್ತಿ ಮೊತ್ತ ಮಹಿಳೆಯರಿಗೂ ಸಿಗಲಿದೆ.

- Advertisement -

ಈ ಮಹತ್ವದ ನಿರ್ಧಾರವನ್ನು ಐಸಿಸಿ ತೆಗೆದುಕೊಂಡಿದೆ. ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಐಸಿಸಿ ಸಭೆ ನಡೆಯುತ್ತಿದ್ದು, ಇಲ್ಲಿ ಮಹಿಳಾ ತಂಡಗಳ ಪ್ರಶಸ್ತಿ ಮೊತ್ತವನ್ನು ಏರಿಕೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

2017ರಿಂದ ಮಹಿಳಾ ಕ್ರಿಕೆಟ್‌ ಕೂಟಗಳ ಪ್ರಶಸ್ತಿ ಮೊತ್ತವನ್ನು ಏರಿಕೆ ಮಾಡಿಕೊಂಡು ಬರುತ್ತಿದ್ದೇವೆ. ಇತ್ತೀಚೆಗಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್‌ಗೆ ಭಾರೀ ಮನ್ನಣೆ ದೊರೆಯುತ್ತಿದೆ. ಹೀಗಾಗಿ ಪುರುಷರಿಗೆ ನೀಡುವಷ್ಟೇ ಹಣವನ್ನು ಮಹಿಳಾ ಕೂಟಗಳಿಗೂ ನೀಡಲು ನಿರ್ಧರಿಸಿದ್ದೇವೆ ಎಂದು ಐಸಿಸಿ ಮುಖ್ಯಸ್ಥ ಗ್ರೆಗ್ ಬಾರ್ಕ್ಲೇ ಹೇಳಿದ್ದಾರೆ.

- Advertisement -

2020 ಮತ್ತು 2023ರಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಕ್ರೀಡಾಕೂಟದಲ್ಲಿ ಗೆದ್ದ ತಂಡಕ್ಕೆ 8.20 ಕೋಟಿ ರೂ. ಮತ್ತು ರನ್ನರ್‌ ಅಪ್‌ ತಂಡಕ್ಕೆ 4.10 ಕೋಟಿ ರೂ. ನೀಡಲಾಗಿತ್ತು. 2018ಕ್ಕೆ ಹೋಲಿಸಿದರೆ ಇದು 5 ಪಟ್ಟು ಹೆಚ್ಚಳವಾಗಿತ್ತು. 2022ರ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಗೆದ್ದ ತಂಡಕ್ಕೆ 28.71 ಕೋಟಿ ರೂ. ಮತ್ತು ರನ್ನರ್‌ ಅಪ್‌ ತಂಡಕ್ಕೆ 16.40 ಕೋಟಿ ರೂ. ನೀಡಲಾಗಿತ್ತು.

2019ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ನಲ್ಲಿ ಗೆದ್ದ ತಂಡಕ್ಕೆ 32.81 ಕೋಟಿ ರೂ. ನೀಡಲಾಗಿದ್ದರೆ ರನ್ನರ್‌ ಅಪ್‌ ತಂಡಕ್ಕೆ 16.40 ಕೋಟಿ ರೂ. ನೀಡಲಾಗಿತ್ತು. 2022ರಲ್ಲಿ ನಡೆದ ಐಸಿಸಿ ಪುರುಷರ ಟಿ20 ಪುರುಷರ ವಿಶ್ವಕಪ್‌ನಲ್ಲಿ ಗೆದ್ದ ತಂಡಕ್ಕೆ 13.12 ಕೋಟಿ ರೂ. ನೀಡಿದ್ದರೆ ರನ್ನರ್‌ ಅಪ್‌ ತಂಡಕ್ಕೆ 6.5 ಕೋಟಿ ರೂ. ನೀಡಲಾಗಿತ್ತು.



Join Whatsapp