ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ಕೊಡದಿದ್ರೆ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ: ಈಶ್ವರಪ್ಪ

Prasthutha|

ಶಿವಮೊಗ್ಗ: ಜೈನ ಮುನಿ ಹತ್ಯೆಯನ್ನು ಕೇವಲ ಒಬ್ಬರು, ಇಬ್ಬರು ಮಾಡಿರಲು ಸಾಧ್ಯವಿಲ್ಲ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

- Advertisement -

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬುದು ದೇಶದ ನಾಗರಿಕರ ಅಭಿಪ್ರಾಯವಾಗಿದೆ. ರಾಜ್ಯದ ಪೊಲೀಸರ ಬಗ್ಗೆ ಗೌರವ ಇದೆ. ಪೊಲೀಸ್ ತನಿಖೆ ಒಂದು ಕಡೆ ನಡೆಯಲಿ. ಅದರಂತೆ ಸಿಬಿಐ ತನಿಖೆ ಸಹ ನಡೆಯಲಿ. ಸಿಬಿಐ ತನಿಖೆ ನಡೆದರೆ ಸತ್ಯಾಸತ್ಯತೆ ಹೊರ ಬರುತ್ತದೆ ಎಂದಿದ್ದಾರೆ.

ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದಾಗ, ಪ್ರೇಮ್ ಸಿಂಗ್‍ಗೆ ಚಾಕು ಇರಿತ ಪ್ರಕರಣ ನಡೆದಾಗ ಪೊಲೀಸ್ ತನಿಖೆ ನಡೆಯುವಾಗಲೇ ಎನ್‍ಐಎ ತನಿಖೆಗೆ ವಹಿಸಲಾಗಿತ್ತು. ಎನ್‍ಐಎ ತನಿಖೆ ನಂತರ ದೇಶದಲ್ಲಿ ದುಷ್ಕೃತ್ಯ ನಡೆಸುವ ಸಂಘಟನೆಗಳ ಹುನ್ನಾರ ಬಹಿರಂಗವಾಗಿತ್ತು. ಈ ಎರಡೂ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸಿಬಿಐ ತನಿಖೆಗೆ ಒತ್ತಾಯಿಸಲಾಗುತ್ತಿದೆ ಎಂದಿದ್ದಾರೆ.

- Advertisement -

ಅನೇಕ ಬಾರಿ ಪೊಲೀಸ್ ಇಲಾಖೆ ತನಿಖೆ ಮಾಡಿ ಯಶಸ್ವಿಯಾಗಿದೆ. ಆದರೆ ಕೆಲವು ಪ್ರಕರಣಗಳಲ್ಲಿ ಸಿಬಿಐಗೆ ಕೊಟ್ಟ ನಂತರ ನ್ಯಾಯ ಸಿಕ್ಕಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸಿಬಿಐ ತನಿಖೆಗೆ ವಹಿಸುವುದಿಲ್ಲ ಎನ್ನುತ್ತಿದ್ದಾರೆ. ಸಿಬಿಐ ತನಿಖೆಗೆ ವಹಿಸದಿದ್ದರೆ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಆಪಾದನೆ ರಾಜ್ಯ ಸರ್ಕಾರದ ಮೇಲೆ ಬರಲಿದೆ ಎಂದು ಹೇಳಿದ್ದಾರೆ.

ಸಿಬಿಐ ತನಿಖೆಗೆ ವಹಿಸಲು ಏಕೆ ಮೀನಾ ಮೇಷ ಎಣಿಸುತ್ತಿದ್ದೀರಾ? ಸಿಬಿಐ ತನಿಖೆಗೆ ಕೊಡದಿದ್ದರೆ, ದೇಶದ ಜನರ ಆಕ್ರೋಶ ಕಾಂಗ್ರೆಸ್ ವಿರುದ್ಧ ಸ್ಫೋಟವಾಗಲಿದೆ ಎಂದಿದ್ದಾರೆ.



Join Whatsapp