ಬೆಂಗಳೂರು: ಕರ್ನಾಟಕ ರಾಜ್ಯ ಎಸ್ಸಿ/ ಎಸ್ಟಿ ಪತ್ರಿಕಾ( ಸರ್ಕಾರದ ಮಾನ್ಯತೆ ಪಡೆದ) ಸಂಪಾದಕರ ಸಂಘದ 2022-23 ನೇ ಸಾಲಿನ ರಾಜ್ಯಮಟ್ಟದ ‘ ಬಿ.ರಾಚಯ್ಯ ದತ್ತಿನಿಧಿ ವಾರ್ಷಿಕ ಪ್ರಶಸ್ತಿ’ ಗೆ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಆಯ್ಕೆಯಾಗಿದ್ದಾರೆ.
ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತ,ದಮನಿತರ ಪರವಾಗಿ ವೃತ್ತಿಪರತೆಯಿಂದ ದುಡಿದಂತಹ ಸಾರ್ವತ್ರಿಕವಾಗಿ ಹಿರಿಯ ಪತ್ರಕರ್ತರೊಬ್ಬರನ್ನು ಗುರುತಿಸಿ ಪ್ರತಿವರ್ಷ ಹಿರಿಯ ಮುತ್ಸದ್ದಿ ರಾಜಕಾರಣಿ ಬಿ.ರಾಚಯ್ಯ ಅವರ ಹೆಸರಿನಲ್ಲಿ ಸಂಘದಲ್ಲಿ ಸ್ಥಾಪಿಸಿರುವ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.
2022-23 ನೇ ಸಾಲಿನ ಬಿ.ರಾಚಯ್ಯ ದತ್ತಿನಿಧಿ ರಾಜ್ಯ ಪ್ರಶಸ್ತಿ ಗೆ ಸುದ್ದಿ ಮಾಧ್ಯಮಕ್ಷೇತ್ರದಲ್ಲಿ ದಲಿತರು- ದಮನಿತರ ಪರವಾಗಿ ಅಹರ್ನಿಶಿ ದುಡಿಯುತ್ತಿರುವ ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 10,000 ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಹೊಂದಿದೆ.
ಅದೇ ರೀತಿ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಎಸ್ಸಿ/ಎಸ್ಟಿ ಸಮುದಾಯದ ಮೂವರು ಹಿರಿಯ ಸಂಪಾದಕರಿಗೆ ನೀಡಲಾಗುವ “ವಾರ್ಷಿಕ ಪ್ರಶಸ್ತಿ” ಗಳಿಗೆ ಕೋಲಾರದ ಸಿ .ಮುನಿಯಪ್ಪ, ಚಿತ್ರದುರ್ಗದ ಮೈಲಾರಪ್ಪ ಮತ್ತು ಬೀದರ್ ನ ಮಾಳಪ್ಪ ಅಡಸಾರೆ ಅವರು ಬಾಜನರಾಗಿದ್ದಾರೆ. ಪ್ರಶಸ್ತಿಯು ತಲಾ 5000 ರೂ. ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.
ಇದೇ ಜುಲೈ ಕೊನೆ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಚೆಲುವರಾಜು ಮತ್ತು ಪ್ರಧಾನ ಕಾರ್ಯದರ್ಶಿ ಸೋಮಶೇಖರ ಕೆರಗೋಡು ಪ್ರಕಟನೆಯಲ್ಲಿ ತಿಳಿಸಿದ್ದಾರೆ.