ಮಂಗಳೂರು: ಕಳೆದ ಶನಿವಾರ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಹಿತ್ಲುವಿನಲ್ಲಿ ಕೊಲೆಯಾದ ಅಂಗಡಿಯ ಕಾರ್ಮಿಕ ಗಜ್ವಾನ್ ಆಲಿಯಾಸ್ ಜಗ್ಗುನ ವಿಳಾಸ ಪತ್ತೆಗೆ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಈತ ಉತ್ತರ ಭಾರತದವನು ಎನ್ನಲಾಗಿದ್ದು, ಈತನ ವಾರಸುದಾರರು ಯಾರು ಎಂಬುದು ಇದುವರೆಗೆ ಗೊತ್ತಾಗಿಲ್ಲ. ಈತನನ್ನು ಗಜ್ವಾನ್ ಎಂದು ಕರೆಯಲಾಗುತ್ತಿತ್ತು. ಆದರೆ ಈತನ ನಿಜ ಹೆಸರೇನು ಎಂಬುದು ಕೂಡ ತಿಳಿದಿಲ್ಲ. ಸುಮಾರು 5.5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ದೃಢಕಾಯ ಶರೀರ, ಕಪ್ಪು ತಲೆ ಕೂದಲು, ಕುರುಚಲು ಗಡ್ಡ ಹೊಂದಿದ್ದಾನೆ. ಈತನ ಸಂಬಂಧಿಕರು ಅಥವಾ ಪರಿಚಯಸ್ಥರು ಇದ್ದರೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ 0824-2220518 ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಕೊಲೆ ಆರೋಪಿ ಅಂಗಡಿ ಮಾಲಕ ತೌಸಿಫ್ ಹುಸೇನ್ ಮೂಲತಃ ಹಾಸನದ ಬೇಲೂರಿನವನಾಗಿದ್ದು ಮಂಗಳೂರಿನಲ್ಲಿ ವಾಸವಾಗಿದ್ದ. ಈತನಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.