ಕಳಪೆ ರಸ್ತೆ ಕಾಮಗಾರಿ ಆರೋಪ : ಎಂಜಿನಿಯರ್‌ಗೆ ಕಲ್ಲೇಟು ಹೊಡೆದ ಗ್ರಾಮಸ್ಥರು!

Prasthutha|

ಚಿತ್ರದುರ್ಗ: ಕಳಪೆ ರಸ್ತೆ ಕಾಮಗಾರಿಯ ಆರೋಪ ಹೊರಿಸಿ ಗ್ರಾಮಸ್ಥರು ಎಂಜಿನಿಯರ್‌ಗೆ ಕಲ್ಲೇಟು ಹೊಡೆದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ತಲೆಗೆ ಗಂಭೀರ ಗಾಯವಾಗಿರುವ ಹಿನ್ನೆಲೆ ಎಂಜಿನಿಯರ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಘಟನೆ ಚಿತ್ರದುರ್ಗ ಜಿಲ್ಲೆಯ ಕಸವನಹಳ್ಳಿಯಲ್ಲಿ ನಡೆದಿದೆ. ಕಸವನಹಳ್ಳಿ ಪಿಡಬ್ಲ್ಯುಡಿ ಎಂಜಿನಿಯರ್ ನಾಗರಾಜ್‌ಗೆ ಗ್ರಾಮಸ್ಥರು ಸೇರಿಕೊಂಡು ಕಲ್ಲೆಸೆದಿದ್ದಾರೆ ಎನ್ನಲಾಗಿದೆ. ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಡಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕಸವನಹಳ್ಳಿ ರಸ್ತೆ ಕಾಮಗಾರಿ ಮಾಡಲಾಗುತ್ತಿತ್ತು. ಆದರೆ ರಸ್ತೆ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಸ್ತೆ ಕಾಮಗಾರಿ ವೀಕ್ಷಣೆಗೆಂದು ತೆರಳಿದ್ದ ವೇಳೆ ಎಂಜಿನಿಯರ್ ಅನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಗಲಾಟೆ ನಡೆದು, ನೂಕಾಟ, ತಳ್ಳಾಟದ ವೇಳೆ ನಾಗರಾಜ್ ಮೇಲೆ ಕಲ್ಲೆಸೆಯಲಾಗಿದೆ. ನಾಗರಾಜ್ ತಲೆಗೆ ಗಂಭೀರ ಗಾಯವಾಗಿರುವ ಹಿನ್ನೆಲೆ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

- Advertisement -

ಘಟನೆ ಸಂಬಂಧ ಕಸವನಹಳ್ಳಿಯ ವೀರಕರಿಯಪ್ಪ ಮತ್ತಿತರರ ವಿರುದ್ಧ ಹಲ್ಲೆಯ ಆರೋಪ ಹೊರಿಸಲಾಗಿದೆ. ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.