ಗಾಝಿಪುರ : ನಾಳೆ ನಡೆಯಲಿರುವ ರೈತರ ಟ್ರಾಕ್ಟರ್ ಪರೇಡ್ ಗೆ ರೈತರು ಭಾಗವಹಿಸಲಿದ್ದಾರೆ ಎನ್ನುವ ಶಂಕೆಯಿಂದ ಟ್ರಾಕ್ಟರ್ ಗಳಿಗೆ ಇಂಧನ ನೀಡದಂತೆ ಪೆಟ್ರೋಲ್ ಪಂಪ್ ಗಳಿಗೆ ನೀಡಲಾಗಿದ್ದ ಆದೇಶವನ್ನು ಉತ್ತರ ಪ್ರದೇಶದ ಗಾಝಿಪುರ ಪೊಲೀಸರು ಹಿಂಪಡೆದಿದ್ದಾರೆ. ಎರಡು ಠಾಣೆಗಳ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದ್ದ ಆದೇಶವನ್ನು ಹಿಂಪಡೆಯಲಾಗಿದೆ.
ನಾಳೆ (ಜ.26) ನಡೆಯುವ ಟ್ರಾಕ್ಟರ್ ರ್ಯಾಲಿಯಲ್ಲಿ ಭಾಗವಹಿಸದಂತೆ ತಡೆಯೊಡ್ಡಲು ಕೆಲವೆಡೆ ರೈತರಿಗೆ ಗೃಹ ಬಂಧನ ವಿಧಿಸಲಾಗಿದೆ ಎಂದೂ ಸಮಾಜವಾದಿ ಪಕ್ಷ ಟ್ವೀಟ್ ಮಾಡಿದೆ.
ಸುಹ್ವಾಲ್ ಮತ್ತು ಸಯೀದ್ ಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಟ್ರಾಕ್ಟರ್ ಗಳಿಗೆ ಇಂಧನ ನೀಡದಂತೆ ನೀಡಲಾಗಿರುವ ಆದೇಶದ ಬಗ್ಗೆ ತಮಗೆ ಆಘಾತವಾಗಿದೆ ಎಂದು ಗಾಝಿಪುರ ಪೊಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್ ಸಿಂಗ್ ಹೇಳಿದ್ದಾರೆ. ಈ ಕುರಿತು ತನಿಖೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ.
ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು, ಹೆದ್ದಾರಿಗಳಲ್ಲಿ ಟ್ರಾಕ್ಟರ್ ಚಲಾಯಿಸುವುದಕ್ಕೂ ನಿಷೇಧ ಹೇರಲಾಗಿತ್ತು ಅವರು ಹೇಳಿದ್ದಾರೆ.