ಹೈದರಾಬಾದ್ : ಇಲ್ಲಿನ ಇಂಗ್ಲಿಷ್ ಮತ್ತು ವಿದೇಶಿ ಬಾಷಾ ವಿಶ್ವವಿದ್ಯಾಲಯದಲ್ಲಿ ಒಬಿಸಿ ಸಮುದಾಯಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ರಾಷ್ಟ್ರೀಯ ವಕ್ತಾರ ದಾಸೋಜು ಸ್ರವಣ್ ಆಪಾದಿಸಿದ್ದಾರೆ.
ಈ ಸಂಬಂಧ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
“ಸಂವಿಧಾನದ ರಕ್ಷಕರೇ ಸಂವಿಧಾನ ಮತ್ತು ಅದರ ನೀತಿಗಳನ್ನು ನಾಶಪಡಿಸುತ್ತಿರುವುದು ವಿಷಾಧನೀಯ. ಮುಖ್ಯವಾಗಿ ಗಮನಿಸುವುದಾದರೆ, ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯದ ಉಪ ಕುಲಪತಿ ಸುರೇಶ್ ಕುಮಾರ್, ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ವಿಷಯದಲ್ಲಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಒಬಿಸಿ ಸಮುದಾಯಗಳ ಜನರ ಸಾಂವಿಧಾನಿಕ ಹಕ್ಕುಗಳನ್ನು ಅವರು ಜಾರಿಗೊಳಿಸುತ್ತಿಲ್ಲ” ಎಂದು ಸ್ರವಣ್ ಹೇಳಿದ್ದಾರೆ.
ಒಬಿಸಿ ಸಮುದಾಯಗಳಿಗೆ ಮೀಸಲಾದ ಬೋಧಕರ ಹುದ್ದೆಗಳನ್ನು ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ ತುಂಬದೆ ವಂಚಿಸುತ್ತಿರುವ ಬಗ್ಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ತಲ್ಲೋಜು ಆಚಾರಿ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ವಿವಿಯ 236 ಬೋಧಕರಲ್ಲಿ 176 ಹುದ್ದೆಗಳನ್ನು ತುಂಬಲಾಗಿದೆ. ಮೀಸಲಾತಿ ನೀತಿ ಪ್ರಕಾರ, ಒಬಿಸಿ ಸಮುದಾಯಗಳಿಗೆ 64 ಹುದ್ದೆಗಳನ್ನು ನೀಡಬೇಕು. ಅವರಲ್ಲಿ 27 ಹುದ್ದೆಗಳನ್ನು ಮಾತ್ರ ತುಂಬಲಾಗಿದೆ. ಉಪಕುಲಪತಿಯವರು 58 ಹುದ್ದೆಗಳ ನೇಮಕಾತಿಗೆ ಸುತ್ತೋಲೆ ಬಿಡುಗಡೆಗೊಳಿಸಿದ್ದು, ಅವರದಲ್ಲಿ ಒಬಿಸಿ ಸಮುದಾಯದ 8 ಹುದ್ದೆಗಳಿಗೆ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮೀಸಲಾತಿಯಿದ್ದರೂ ಒಬಿಸಿ ಸಮುದಾಯಗಳನ್ನು ಏಕೆ ಅವಕಾಶದಿಂದ ವಂಚಿಸಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.