ಪ್ರಜಾಪ್ರಭುತ್ವದ ಗೌರವ ಮಣ್ಣುಪಾಲು ಮಾಡುತ್ತಿರುವ ‘ಢೋಂಗಿ’ ರಾಷ್ಟ್ರೀಯವಾದ

Prasthutha|

-ರಮೇಶ್ ಎಸ್.ಪೆರ್ಲ

- Advertisement -

ಪ್ರಜಾಪ್ರಭುತ್ವ ಇತಿಹಾಸದಲ್ಲೇ ಕರಾಳ ದಿನ. ಅಮೆರಿಕದ ಎರಡು ಶತಮಾನಗಳ ಹಳೆಯ ಸಂಸತ್ ಭವನ ಕ್ಯಾಪಿಟಲ್ ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಅಂಧ ಭಕ್ತರು ದಾಳಿ ನಡೆಸಿದರು. ಅದಕ್ಕಿಂತಲೂ ಬೇಸರದ ಮತ್ತು ಅಸಂಭವನೀಯ ವಿಚಾರ ಈ ಲೋಕಲ್ ಭಯೋತ್ಪಾದಕರ ದಾಳಿಯಲ್ಲಿ ಭಾರತೀಯ ತ್ರಿವರ್ಣ ಪತಾಕೆ ಕಾಣಿಸಿಕೊಂಡಿರುವುದು. ಅಮೆರಿಕ ದೇಶದಲ್ಲಿ ಅನಗತ್ಯವಾಗಿ ಉಂಟಾಗಿರುವ ಕಲಹದಲ್ಲಿ ಭಾರತದ ರಾಷ್ಟ್ರಧ್ವಜ ಬಳಕೆ ಖಂಡನೀಯ ಮಾತ್ರವಲ್ಲದೆ ನಾಚಿಕೆಗೇಡಿನ ವಿಚಾರ.

ಇಂದಿನ ನಮ್ಮ ದೇಶದ ರಾಜಕೀಯ ಪರಿಸ್ಥಿತಿಯಲ್ಲಿ ರಾಷ್ಟ್ರಧ್ವಜ ಪ್ರದರ್ಶನ ನೂರಕ್ಕೆ ನೂರು ಸರಿಯಲ್ಲ ಎನ್ನುವಂತಿಲ್ಲ. ನಾವು ಈಗಾಗಲೇ ವಿದೇಶವೊಂದರ ರಾಜಕೀಯದಲ್ಲಿ ತಲೆಹಾಕದಿರುವ ಸೌಜನ್ಯವನ್ನು ಮುರಿದಿದ್ದೇವೆ. ಆದಾಗಲೇ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ನಮ್ಮ ದೇಶದ ಪ್ರಧಾನಿ ಪ್ರಚಾರ ಮಾಡುತ್ತಾರೆ. ಮಾತ್ರವಲ್ಲದೆ, ನಮ್ಮ ದೇಶದಲ್ಲಿ ಕೂಡ ನಮ್ಮ ರಿಯಲ್ ಎಸ್ಟೇಟ್ ಡೆವಲಪರ್, ಟ್ರಂಪ್ ಟವರ್ ಹೆಸರಿನ ಅಪಾರ್ಟ್ ಮೆಂಟ್ ನಿರ್ಮಿಸಿದ ಟ್ರಂಪ್ ಚುನಾವಣಾ ಪ್ರಚಾರ ನಡೆಸುತ್ತಾನೆ. ದೇಶದ ರಾಜಕೀಯ ಪರಿಸ್ಥಿತಿಯೇ ಹೀಗಿರುವಾಗ ಉದ್ಯೋಗಕ್ಕಾಗಿ ಅಮೆರಿಕ ಸೇರಿರುವ ಭಾರತೀಯನೊಬ್ಬ ಧ್ವಜ ಹಿಡಿದಿರುವುದು ಅಸಾಧು ಎಂದು ಹೇಳಲಾಗುವುದಿಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

- Advertisement -

ಇದಕ್ಕಿಂತಲೂ ಕುತೂಹಲ ಮತ್ತು ಕೊಳಕು ವಿಚಾರ ಈ ಬಾವುಟ ಹಿಡಿದವ ಅಮೆರಿಕದಲ್ಲಿ ಟ್ರಂಪ್ ಬೆಂಬಲಿಗನಾದರೆ ಭಾರತದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಸ್ನೇಹಿತ. ಮತ್ತೊಂದೆಡೆ, ಆತ ಬಿಜೆಪಿ ಬೆಂಬಲಿಗನೆಂದೂ ಹೇಳಲಾಗುತ್ತಿದೆ. ಕೇರಳದ ಕೊಚ್ಚಿ ಚಂಬರಕ್ಕರ ನಿವಾಸಿ ಆಗಿರುವ ವಿನ್ಸೆಂಟ್ ಕ್ಸೇವಿಯರ್ ಸೋಶಿಯಲ್ ಮೀಡಿಯಾದಲ್ಲಿ ರಿಪಬ್ಲಿಕ್ ಪಾರ್ಟಿಯ ಪರವಾಗಿ ಪ್ರಚಾರ ನಡೆಸುತ್ತಲೇ ಇದ್ದ. ಅಮೆರಿಕದ ನಿರ್ಗಮನ ಅಧ್ಯಕ್ಷನ ಉಗ್ರ ರಾಷ್ಟ್ರೀಯವಾದ ಅಥವಾ ನಮ್ಮ ದೇಶದ ಭಾಷೆಯಲ್ಲಿ ಹೇಳುವುದಾದರೆ ಢೋಂಗಿ ರಾಷ್ಟ್ರೀಯವಾದಕ್ಕೆ ಈ ವಿನ್ಸೆಂಟ್ ಅತಿಯಾಗಿ ಮಾರು ಹೋಗಿದ್ದ ಎನ್ನುವುದಕ್ಕಿಂತಲೂ, ಅದರ ಅಮಲು ಏರಿತ್ತು ಎನ್ನುವುದು ಸೂಕ್ತವಾಗಿದೆ.

ಅಮೆರಿಕದ ಅಧ್ಯಕ್ಷ ಚುನಾವಣೆಯಲ್ಲಿ ಸೋಲು ಖಚಿತ ಆಗುತ್ತಿದ್ದಂತೆ ಟ್ರಂಪ್, ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಚೀರಾಡಲು ಆರಂಭಿಸಿದ್ದ. ಕ್ಯಾಪಿಟಲ್ ವಿಚಾರಕ್ಕೆ ಸಂಬಂಧಿಸಿ ಇದೀಗ ಟ್ರಂಪ್ ಟ್ವಿಟ್ಟರ್ ಖಾತೆ ನಿರ್ಬಂಧಕ್ಕೊಳಗಾಗಿರುವುದು ಇಲ್ಲಿ ಗಮನಾರ್ಹವಾಗಿದೆ. ಅಮೆರಿಕದ ಚುನಾವಣೆಯ ಫಲಿತಾಂಶ ಬಂದ ಕೂಡಲೇ ಸರಕಾರ ಬದಲಾಗುವುದಿಲ್ಲ. ಮತದಾನ ನವೆಂಬರ್ ತಿಂಗಳಲ್ಲಿ ನಡೆದಿದ್ದರೂ ಅಧಿಕಾರ ಹಸ್ತಾಂತರ ಜನವರಿ ತಿಂಗಳ ಕೊನೆಗೆ ನಡೆಯಲಿದೆ. ಇನ್ನೆರಡು ವಾರಗಳು ಬಾಕಿ ಇರುವಂತೆ ವಿಶ್ವ ಕಂಡಿರುವ ಅತ್ಯಂತ ನೀಚ ರಾಜಕಾರಣಿ ತನ್ನ ಕಾನೂನು ಭಂಗಗೊಳಿಸುವ ಪಡೆಯನ್ನು ಛೂ ಬಿಟ್ಟಿದ್ದಾನೆ. ಅದರೊಂದಿಗೆ, ಟ್ರಂಪ್ ಭಕ್ತರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನಕಾರರು 200 ವರ್ಷಗಳ ಇತಿಹಾಸವಿರುವ ಪ್ರಜಾಪ್ರಭುತ್ವದ ದೇಗುಲ ಎನ್ನಲಾಗುವ ಭವನಕ್ಕೆ ಮುತ್ತಿಗೆ ಹಾಕುತ್ತಾರೆ. ಅಲ್ಲಿದ್ದ ಪೊಲೀಸರ ಮೇಲೂ ಹಲ್ಲೆ ನಡೆಸುತ್ತಾರೆ. ಕಾಂಗ್ರೆಸ್ ಅಧಿವೇಶನಕ್ಕೆ ನುಗ್ಗುತ್ತಾರೆ. ಜನಪ್ರತಿನಿಧಿಗಳು ರಕ್ಷಣೆ ಪಡೆದುಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯೊಂದು ಅಮೆರಿಕದಲ್ಲಿ ನಡೆಯುತ್ತಿರುವುದನ್ನು ಊಹಿಸಲೂ ಅಸಾಧ್ಯ. ಆದರೆ, ನಡೆದು ಹೋಗಿದೆ. ಇದಕ್ಕೆ ಬಂಡವಾಳಶಾಹಿ ಫ್ಯಾಶಿಸ್ಟರ ಅಧಿಕಾರ ದಾಹ ಮತ್ತು ಅದಕ್ಕಾಗಿ ನಡೆಸುತ್ತಿರುವ ಢೋಂಗಿ ರಾಷ್ಟ್ರೀಯವಾದದ ಪ್ರೊಪಗಾಂಡ ಕಾರಣ.

ಅಮೆರಿಕದ ಪ್ರಜಾಪ್ರಭುತ್ವ ವಿಶ್ವಾಸಿಗಳಿಗೆ ಮಾತ್ರವಲ್ಲದೆ ಸ್ವತಃ ಟ್ರಂಪ್ ಬೆಂಬಲಿಗರಿಗೆ ಇದು ನಾಚಿಕೆಗೇಡಿನ ವಿಚಾರ ಇದಾಗಿದೆ. ರಿಪಬ್ಲಿಕನ್ ಪಕ್ಷದವರೇ ಇದೀಗ ಟ್ರಂಪ್ ಮಾಡಿರುವ ಅವಾಂತರಕ್ಕೆ ತಲೆತಗ್ಗಿಸಿದ್ದಲ್ಲದೆ, ಇನ್ನುಳಿದ ಎರಡು ವಾರಗಳ ಅವಧಿಗೆ ಟ್ರಂಪ್ ಮುಂದುವರಿಯಬೇಕೆ ಎಂಬ ಪ್ರಶ್ನೆ ಎತ್ತಿದ್ದಾರೆ. ಅಧ್ಯಕ್ಷ ಸ್ಥಾನದಿಂದ ಎತ್ತಂಗಡಿ ಮಾಡುವ ಮಾತುಗಳಿಂತಲೂ ಆತನೊಬ್ಬ ಮಾನಸಿಕ ಸ್ಥಿಮಿತ ಕಳಕೊಂಡ ವ್ಯಕ್ತಿ ಎಂಬ ವ್ಯಾಖ್ಯಾನಗಳು ಕೂಡ ಅಮೆರಿಕಾ ರಾಜಕೀಯ ಮುಖಂಡರಿಂದ ಬಂದಿದೆ.

 ವಿಶ್ವದ ಅಲ್ಲೊಂದು ಇಲ್ಲೊಂದು ದೇಶಗಳಲ್ಲಿ ಮಾತ್ರವಲ್ಲದೆ ಹಲವೆಡೆ ಇತ್ತೀಚೆಗಿನ ದಶಕಗಳಲ್ಲಿ ಫ್ಯಾಶಿಸಂ ಮತ್ತು ಬಂಡವಾಳಶಾಹಿಗಳ ಢೋಂಗಿ ರಾಷ್ಟ್ರೀಯವಾದದ ರಾಜಕೀಯ ವಿಸ್ತಾರ ಆಗುತ್ತಿದೆ. ಪ್ರಜಾಪ್ರಭುತ್ವದ ಸ್ವಾಯತ್ತತೆಯನ್ನು ಕುಂಠಿತ ಮಾಡುವ, ಮಾಧ್ಯಮ ರಂಗವನ್ನು ಆಡಳಿತಗಾರರು ಮತ್ತು ಬಂಡವಾಳಶಾಹಿಗಳ ಕೈಗೊಂಬೆ ಮಾಡುವ ವಿದ್ಯಮಾನಗಳು ಕಳೆದೆರಡು ದಶಕಗಳಿಂದ ನಡೆಯುತ್ತಲೆ ಇವೆ. ಬಹುಸಂಖ್ಯಾತರ ಹೆಸರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕುಲಗೆಡಿಸುವ, ಹೊಸ ಮಾದರಿಯ ಸರ್ವಾಧಿಕಾರಿಗಳ ಅಧಿಕಾರ ಹಿಡಿಯುವ, ಶತಮೂರ್ಖರು ಆಡಳಿತ ವಹಿಸಿಕೊಳ್ಳುವ ವಿದ್ಯಮಾನಗಳು ನಡೆದಿವೆ.

ಅಮೆರಿಕ, ಭಾರತ, ಫ್ರಾನ್ಸ್, ಟರ್ಕಿ, ಬ್ರೆಝಿಲ್, ಇಸ್ರೇಲ್, ಪೋಲೆಂಡ್, ಹಂಗೇರಿ, ರಷ್ಯಾ, ಬೆಲರೂಸ್ ಮುಂತಾದ ರಾಷ್ಟ್ರಗಳು ಬಲಪಂಥೀಯ ಜನಪ್ರಿಯ ರಾಷ್ಟ್ರೀಯವಾದಿ ಸರಕಾರಗಳನ್ನು ಹೊಂದಿವೆ. ಹಳೆಯ ಕಮ್ಯುನಿಸ್ಟ್ ಎಂದು ಹೇಳಲಾದ ರಾಷ್ಟ್ರಗಳು ಈ ಪಟ್ಟಿಯಲ್ಲಿ ಗುರುತಿಸಿಕೊಂಡಿವೆ. ಅದರಲ್ಲೂ ಬೆಲರೂಸ್ ಈಗಲೂ ಯುರೋಪ್ ಖಂಡದ ಕೊನೆಯ ಸರ್ವಾಧಿಕಾರಿಯ ಸರಕಾರವನ್ನು ಹೊಂದಿದೆ. ಇತ್ತೀಚೆಗೆ ಅಮೆರಿಕದಲ್ಲಿ ನಡೆದಿರುವ ಘಟನೆಗಳು, ಬೆಲರೂಸ್ ಮತ್ತು ಭಾರತದ ಇಂದಿನ ರಾಜಕೀಯ ಬೆಳವಣಿಗೆಗಳು ಹೆಚ್ಚು ಕಡಿಮೆ ಒಂದಕ್ಕೊಂದು ಸಾಮ್ಯವನ್ನು ಹೊಂದಿರುವುದು ಕುತೂಹಲಕರವಾಗಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಚುನಾವಣೆಯಲ್ಲಿ ಸೋತರೂ ಕೂಡ ಅಧಿಕಾರದಿಂದ ಇಳಿಯಲು ಸಿದ್ಧವಾಗುತ್ತಿಲ್ಲ. ಇದೇ ರೀತಿ ಬೆಲರೂಸ್ ದೇಶದಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಚುನಾವಣೆ ನಡೆದಿತ್ತು. ಬೆಲರೂಸ್ ದೇಶದಲ್ಲಿ ಸತತವಾಗಿ ಚುನಾವಣಾ ಅಕ್ರಮ ನಡೆಸುವ ಮೂಲಕ ಅಲ್ಲಿಯ ಸರ್ವಾಧಿಕಾರಿ ಗೆಲ್ಲುತ್ತಲೇ ಬಂದಿದ್ದಾನೆ. ಕಳೆದ ಚುನಾವಣೆಯ ವೇಳೆ ವ್ಯಾಪಕವಾಗಿ ಪ್ರತಿಪಕ್ಷಗಳ ಮುಖಂಡರಿಗೆ ಜನಬೆಂಬಲ ವ್ಯಕ್ತವಾಗಿದ್ದು, ಚುನಾವಣೆಯಲ್ಲಿ ಸರ್ವಾಧಿಕಾರಿ ಸೋಲುತ್ತಾನೆ ಎಂದುಕೊಳ್ಳಲಾಗಿತ್ತು. ಫಲಿತಾಂಶ ಪ್ರಕಟವಾದಾಗ ಆತನೇ ಪುನರಾಯ್ಕೆ ಆಗಿದ್ದ. ಆಗ ಜನರು ಬೀದಿಗಿಳಿದು ಹೋರಾಟ ನಡೆಸಿದರು. ನಾವು ಮತ ನೀಡದಿದ್ದರೂ ಅಕ್ರಮವಾಗಿ ಗೆದ್ದಿರುವ ಘೋಷಣೆ ಮಾಡಿದ್ದು, ಅಧಿಕಾರದಿಂದ ಇಳಿಯುವಂತೆ ಜನರು ಹೋರಾಟ ನಡೆಸುತ್ತಿದ್ದಾರೆ.

ಇತ್ತ ಅಮೆರಿಕದಲ್ಲಿ ಶತಮೂರ್ಖನಾದ ಟ್ರಂಪ್ ಸೋಲೊಪ್ಪಲು ಸಿದ್ಧನಿಲ್ಲ. ಒಂದು ವರ್ಷದ ಹಿಂದೆಯೇ ತಾನು ಅಧ್ಯಕ್ಷರ ನಿವಾಸ ಬಿಟ್ಟುಕೊಡುವ ಪ್ರಶ್ನೆ ಇಲ್ಲ ಎಂದು ಘೋಷಿಸಿದ್ದ. ಕಳೆದ ಬಾರಿಯ ಚುನಾವಣೆಯಲ್ಲಿ ಆತನಿಗೆ ರಷ್ಯಾ ನೆರವು ನೀಡಿತ್ತು ಎಂಬ ವಾದ-ವಿವಾದ ಉಂಟಾಗಿತ್ತು. ಆದರೆ, ಈ ಬಾರಿ ಅಮೆರಿಕದ ಡೆಮೊಕ್ರೆಟ್ ಪಕ್ಷದವರು, ಭಾರತದ ಕಾಂಗ್ರೆಸ್ ಪಕ್ಷದವರಂತೆ ಸೋಂಬೇರಿಗಳಾಗದೆ ಟ್ರಂಪ್ ವಿರುದ್ಧ ಎಲ್ಲ ರೀತಿಯ ಪ್ರತಿರೋಧವನ್ನು ಒಡ್ಡಿದ್ದರು. ಈ ಬಾರಿಯ ಅಮೆರಿಕ ಚುನಾವಣೆ ನಡೆದಿದ್ದೇ ಸೋಶಿಯಲ್ ಮೀಡಿಯಾದಲ್ಲಿ. ಅದೂ ಒಂದು ವರ್ಷ ಕಾಲ ನಡೆದಿರಬಹುದು. ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಚುನಾಯಿತ ಅಧ್ಯಕ್ಷ ಜೊ ಬೈಡನ್ ಅವರ ನೇತತ್ವದಲ್ಲಿ ಟ್ರಂಪ್ ಆಡಳಿತವನ್ನು ಕೊನೆಗಾಣಿಸಲು ಪಣತೊಡಲಾಗಿತ್ತು.

ಅಮೆರಿಕದಂತಹ ದೇಶ ಹಿತದೃಷ್ಟಿಯಲ್ಲಿ ಟ್ರಂಪ್ ಸರಕಾರವನ್ನು ಉರುಳಿಸುವುದು ಅನಿವಾರ್ಯ ಆಗಿತ್ತು. ಏಕೆಂದರೆ, ವಿಶ್ವದ ಕಣ್ಣಲ್ಲಿ ಅಮೆರಿಕದ ಮಹತ್ವ ಸಣ್ಣದಾಗಿತ್ತು. ಜಗತ್ತಿನ ದೊಡ್ಡಣ್ಣನಾಗಿದ್ದ ಅಮೆರಿಕ ಅಧ್ಯಕ್ಷ ಜೋಕರ್ ಆಗಿದ್ದ. ಸಂಸತ್ ಭವನದ ಆಕ್ರಮಣ ಅಮೆರಿಕದ ಪಾಲಿಗೆ ದುರಂತ ಘಟನೆ. ಪ್ರಜಾಪ್ರಭುತ್ವ, ನಾಗರಿಕ ಹಕ್ಕುಗಳ ಹೆಸರಿನಲ್ಲಿ ವಿಶ್ವದ ಎಲ್ಲ ದೇಶಗಳ ಆಂತರಿಕ ವಿಚಾರಗಳಲ್ಲಿ ತಲೆ ಹಾಕುತ್ತಿದ್ದ ಅಮೆರಿಕದ ಅಂಗಳದಲ್ಲೇ ಅಂತಃಕಲಹ ನಡೆದಿದೆ. ನಮ್ಮಿಳಗಿನ ಭಯೋತ್ಪಾದಕರು ಎಂದೇ ಡೆಮಾಕ್ರಟಿಕ್ ಪಾರ್ಟಿ ಟಿಪ್ಪಣಿ ಮಾಡಿದೆ. ಅಮೆರಿಕದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯದಲ್ಲಿ ಪವಿತ್ರವಾದ ಭಾರತೀಯ ರಾಷ್ಟ್ರ ಧ್ವಜ ಯಾಕೆ ಎಂಬುದು ಬಹುಮಂದಿ ಪ್ರಜ್ಞಾವಂತ ಭಾರತೀಯರ ಪ್ರಶ್ನೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಟ್ರಂಪ್ ನಾಯಕತ್ವಕ್ಕೆ ಬೆಂಬಲ ಸೂಚಿಸಿಲ್ಲ ಎಂಬುದು ಗಮನಿಸಬೇಕಾಗಿದೆ. ಅಮೆರಿಕದಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಬಹುಸಂಖ್ಯೆಯಲ್ಲಿ ಭಾರತೀಯರು ಸಾಂಪ್ರದಾಯಿಕವಾಗಿ ಡೆಮಾಕ್ರಾಟಿಕ್ ಬೆಂಬಲಿಗರು. ಡೊನಾಲ್ಡ್ ಟ್ರಂಪ್ ಅಮೆರಿಕದ ಮಾನ ಕಳೆದರೆ, ಈ ಬುದ್ಧಿಗೇಡಿ ಮಲೆಯಾಳಿ ದೇಶದ ಮಾನ ಕಳೆಯಲು ಯತ್ನಿಸಿದ್ದಾನೆ. ಟ್ರಂಪ್ ಇನ್ನು ಮಂದೆ ಅಮೆರಿಕದ ಮುಖಂಡನೂ ಅಲ್ಲ, ವಿನ್ಸೆಂಟ್ ಭಾರತೀಯ ಪ್ರತಿನಿಧಿಯೂ ಅಲ್ಲ.

Join Whatsapp