ನವದೆಹಲಿ : ಕೃಷಿ ಕಾಯ್ದೆ ಹಿಂಪಡೆಯುವುದಕ್ಕೆ ಆಗ್ರಹಿಸಿ ಜ. 26ರಂದು ರೈತರ ಟ್ರ್ಯಾಕ್ಟರ್ ಪರೇಡ್ ನಡೆಸಲಿರುವ ರೈತರ ಮೇಲೆ ಹಿಂಸಾತ್ಮಕ ದಾಳಿಗೆ ಸಂಚು ನಡೆದಿತ್ತು ಎಂಬ ಸಂಗತಿ ಬಯಲಾಗಿದೆ.
ಶುಕ್ರವಾರ ತಡರಾತ್ರಿ ಸಿಂಘು ಗಡಿಯಲ್ಲಿ ಸಂಯುಕ್ತ ಕಿಸಾನ್ ಯೂನಿಯನ್ ಮುಖಂಡ ಕುಲವಂತ್ ಸಂಧು ಹಾಗೂ ಇತರೆ ರೈತರ ಮುಖಂಡರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ಬಹಿರಂಗವಾಗಿದೆ.
ಸಿಕ್ಕಿ ಬಿದ್ದ ಯುವಕನೊಂದಿಗೆ ಸಂಯಮದಿಂದ ವರ್ತಿಸಿದ ಮುಖಂಡರು, ಆತನನ್ನು ಕೂರಿಸಿಕೊಂಡೇ ಪತ್ರಿಕಾಗೋಷ್ಠಿ ನಡೆಸಿದರು.
ಯುವಕ, ನೆರೆದ ಮಾಧ್ಯಮದವರನ್ನು ಉದ್ದೇಶಿಸಿ, ” ಕಳೆದ ಎರಡು ದಿನಗಳಿಂದ ಇಬ್ಬರು ಯುವತಿಯರು ಸೇರಿದಂತೆ ಹತ್ತು ಜನರು ಸಕ್ರಿಯರಾಗಿದ್ದು, ರೈತರು ಬೀಡು ಬಿಟ್ಟಿರುವ ಪ್ರದೇಶಗಳಲ್ಲಿ ಓಡಾಡಿಕೊಂಡಿದ್ದಾರೆ” ಎಂಬ ಮಾಹಿತಿಯನ್ನು ನೀಡಿದ್ದಾನೆ.
ಜ. 26ರಂದು 50- 60 ಜನರು ಪರೇಡ್ ನಲ್ಲಿ ಪೊಲೀಸ್ ವೇಷದಲ್ಲಿ, ಕೆಲವರು ರೈತರಂತೆ ಪಾಲ್ಗೊಂಡು ಗಲಭೆ ಸೃಷ್ಟಿಸುವ ಉದ್ದೇಶವಿತ್ತು. ಗಾಳಿಯಲ್ಲಿ ಗುಂಡು ಹಾರಿಸುವುದು, ಲಾಠಿ ಚಾರ್ಜ್ ಮಾಡುವುದು ಯೋಜನೆಯ ಭಾಗವಾಗಿತ್ತು ಎಂಬ ಆಘಾತಕಾರಿ ಅಂಶವನ್ನು ಯುವಕನು ಹೊರಹಾಕಿದ್ದಾನೆ.
ಈ ಹಿಂದೆ ಕರ್ನಾಲ್ ನಲ್ಲಿ ನಡೆದ ರೈತ ಹೋರಾಟದಲ್ಲಿ ಭಾಗಿಯಾಗಿ, ರೈತರ ಮೇಲೆ ದಾಳಿ ಮಾಡಿದ್ದಾಗಿ ಒಪ್ಪಿಕೊಂಡಿರುವ ಯುವಕ, ಹಣಕ್ಕಾಗಿ ಈ ಕೆಲಸ ಒಪ್ಪಿಕೊಂಡಿದ್ದು, ನಾನು ಯಾವುದೇ ಸಂಘಟನೆಗೆ ಸೇರಿದವನಲ್ಲ. ನನ್ನ ಗುರುತು ಬಹಿರಂಗ ಪಡಿಸಲು ಒತ್ತಾಯಿಸಬೇಡಿ. ನನ್ನ ಕುಟುಂಬವನ್ನು ಕೊಲ್ಲುವ ಬೆದರಿಕೆಯನ್ನು ಒಡ್ಡಲಾಗಿದೆ ಎಂದು ಮಾಧ್ಯಮಕ್ಕೆ ತನ್ನ ಹಿನ್ನೆಲೆಯನ್ನು ಬಿಚ್ಚಿಟ್ಟನು.
ತಂಡದಲ್ಲಿರುವ ಯುವಕ, ತಂಡದ ಯುವತಿಯೊಬ್ಬಳನ್ನು ಚುಡಾಯಿಸುವಂತೆ ನಟಿಸುವುದು, ಗದ್ದಲ ಸೃಷ್ಟಿಸುವುದು. ಪಂಜಾಬಿಯರು ಹೆಣ್ಣನ್ನು ಅಗೌರವದಿಂದ ನಡೆಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಆಗ ಪಂಜಾಬಿಗಳು ಯಾವುದಾದರೂ ಅಸ್ತ್ರವನ್ನು ಹೊರ ತೆಗೆಯುತ್ತಾರೊ ಎಂಬುದನ್ನು ತಿಳಿಯುವುದು ಮುಖ್ಯ ಯೋಜನೆಯಾಗಿತ್ತು ಎಂದು ತಮ್ಮ ಕಾರ್ಯಯೋಜನೆಯನ್ನು ವಿವರಿಸಿದನು.
ತನಗೆ ಮತ್ತು ತಂಡಕ್ಕೆ ತರಬೇತಿ ನೀಡಲಾಗಿದೆ ಎಂಬ ಅಂಶವನ್ನು ಹೊರಹಾಕಿದ ಯುವಕನು, ‘ಪಂಜಾಬ್ ನವರು ನಮ್ಮ ಶತ್ರುಗಳು, ದೆಹಲಿಯಲ್ಲಿ ಕೂತಿದ್ದಾರೆ. ಹೊಡೆಯಲು ಬಂದಿದ್ದಾರೆ ಎಂದು ಹೇಳಿದರು. ಈ ಹೋರಾಟ ತಪ್ಪು, ರೈತರು ಹೋರಾಟ ಮಾಡುತ್ತಿರುವುದು ಸರಿಯಲ್ಲ. ಇವರೆಲ್ಲಾ ಕಾಂಗ್ರೆಸ್ನವರು. ನಿಮ್ಮ ಪಾಲಿಗೆ ಶತ್ರುಗಳು ಎಂದೆಲ್ಲಾ ಹೇಳಿದ್ದರು’ ಎಂದು ಯುವಕ ವಿವರ ನೀಡಿದನು.
ಲ್ಯಾಂಡ್ ಲೈನ್ ಮೂಲಕ ನಮಗೆ ಸೂಚನೆಗಳು ಬರುತ್ತಿದ್ದವು. ಅದರಂತೆ ನಾವು ಕೆಲಸ ಮಾಡುತ್ತಿದ್ದೆವು’ ಎಂದು ಮಾಹಿತಿ ನೀಡಿದ ಯುವಕ, ಈ ಸಂಚಿನಲ್ಲಿ ಪಾಲ್ಗೊಂಡವರ ಕೆಲವು ಹೆಸರುಗಳನ್ನು ನೀಡಿದ್ದಾನೆ.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಕುಲವಂತ ಸಂಧು, ನಾಲ್ವರು ರೈತ ಮುಖಂಡರ ಮೇಲೆ ದಾಳಿ ನಡೆಸುವ ಉದ್ದೇಶವೂ ಇತ್ತು ಎಂಬುದು ಈ ಯುವಕನಿಂದ ತಿಳಿದು ಬಂದಿದೆ. ಆ ನಾಲ್ಕು ಜನರನ್ನು ಅಂತಾರಾಷ್ಟ್ರೀಯ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಅವರೆಲ್ಲರನ್ನೂ ಈ ಯುವಕ ಗುರುತಿಸಿದ್ದಾನೆ ಎಂದು ತಿಳಿಸಿದರು.
ಧರ್ಮದ ಹೆಸರಿನಲ್ಲಿ ದಾಳಿ ಮಾಡುವ ಪ್ರಯತ್ನ ನಡೆಯಿತು. ಈಗ ಬಡವರನ್ನು ಬಳಸಿಕೊಂಡು ನಮ್ಮ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.