ಕೊಪ್ಪಳ: ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಸಾವು ಪ್ರಕರಣ ಸಂಬಂಧ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಘೋಷಣೆ ಮಾಡಿದ್ದಾರೆ.
ಮೃತರ ಕುಟುಂಬಸ್ಥರನ್ನು ಭೇಟಿಯಾದ ಸಚಿವರು ಸಾಂತ್ವನ ಹೇಳಿ ಪರಿಹಾರ ಘೋಷಣೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಪರಿಹಾರ ಘೋಷಣೆ ಮಾಡಿದ್ದೇನೆ. ಒಂದು ವಾರದೊಳಗೆ ಅವರಿಗೆ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದಾರೆ.
ಜಲ ಜೀವನ್ ಕಾಮಗಾರಿ ವೇಳೆ ಲೋಪಗಳಾಗಿವೆ. ಇದರಿಂದ ಗ್ರಾಮದಲ್ಲಿ ನೀರು ಕಲುಷಿತವಾಗಿದೆ. ಈ ಪ್ರಕರಣದಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ.
ಮೃತರಿಗೆ ಒಂದು ವಾರದಲ್ಲಿ 2 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ ಶಿವರಾಜ್ ತಂಗಡಗಿ, ಕಲುಷಿತ ನೀರು ಪೂರೈಕೆಯಾಗಲು ಕಾರಣರಾದವರ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನೊಂದೆಡೆ, ಕಾಮಗಾರಿ ನಡೆಸಿದ ಕಾಂಟ್ರಾಕ್ಟರ್ನನ್ನು ಕಪ್ಪು ಪಟ್ಟಿಗೆ ಸೇರಿಸಲು ಜಿಲ್ಲಾಡಳಿತ ಮುಂದಾಗಿದೆ.
ಹಿಂದಿನ ಸರ್ಕಾರದಲ್ಲಿ ನಡೆದ ಅಕ್ರಮದ ತನಿಖೆ ನಡೆಸುತ್ತೇವೆ. ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಶಿವರಾಜ ತಂಗಡಗಿ ಹೇಳಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ 30ಕ್ಕೂ ಹೆಚ್ಚು ಜನರಿಗೆ ವಾಂತಿ ಬೇಧಿಯಾಗಿ ಒಂದೂವರೆ ವರ್ಷದ ಮಗು ತಾವರಗೇರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿತ್ತು. ನಂತರ ಹೊನ್ನಮ್ಮ ಎಂಬ ವೃದ್ದೆ ಸಾವನ್ನಪ್ಪಿದ್ದರು. ಆದರೆ ವೃದ್ಧೆಗೆ ಬೇರೆ ಬೇರೆ ಕಾಯಿಲೆಗಳಿದ್ದವು ಎಂದು ಕೊಪ್ಪಳ ಡಿಹೆಚ್ಓ ತಿಳಿಸಿದ್ದರು. ಇದಾದ ನಂತರ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವೆನೆಯಿಂದ 15 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿತ್ತು. ಈ ಪೈಕಿ ಬಾಲಕಿ ಸಾವನ್ನಪ್ಪಿದ್ದಳು.