ಧಾರವಾಡ: ಪದ್ಮಶ್ರೀ ಪುರಸ್ಕೃತರಾದ ವೃಕ್ಷಮಾತೆ ತುಳಸಿ ಗೌಡ ಮತ್ತು ಕೃಷಿ ಉಪಕರಣಗಳ ಸಂಶೋಧಕ ಅಬ್ದುಲ್ ಖಾದರ್ ನಡಕಟ್ಟಿನ್ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ.
ಮಾ. 12ರಂದು ನಡೆಯಲಿರುವ 36ನೇ ಘಟಿಕೋತ್ಸವ ಸಂದರ್ಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ನಿವಾಸಿ ಅಬ್ದುಲ್ ಖಾದರ್ ನಡಕಟ್ಟಿನ್ ಕೃಷಿ ಉಪಕರಣಗಳ ಸಂಶೋಧಕರಾಗಿದ್ದಾರೆ. ಬಿತ್ತನೆ ಕೂರಿಗೆ ಸಂಶೋಧನೆ ಮಾಡಿದ್ದ ಅಬ್ದುಲ್ ಖಾದರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡ ದೊರೆತಿದೆ.
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಪುಟ್ಟ ಗ್ರಾಮ ಹೊನ್ನಳ್ಳಿಯ ತುಳಸಿ ಗೌಡ ಅವರು ವರ್ಷಕ್ಕೆ 30 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು, ಪೋಷಿಸುವ ಮೂಲಕ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲೊಂದಾದ ಪದ್ಮಶ್ರೀಯನ್ನು ಸಹ ಪಡೆದುಕೊಂಡಿದ್ದಾರೆ.