ಸೌದಿ ಅರೇಬಿಯಾದಲ್ಲಿ ಮರಣದಂಡನೆಗಳ ಪ್ರಮಾಣ ಶೇಕಡಾ 85ರಷ್ಟು ಕುಸಿದಿದೆ ಎಂದು ಅಂಕಿ ಅಂಶಗಳು ಬಿಡುಗಡೆಗೊಳಿಸಿದೆ. ಮಾದಕವಸ್ತು ಸಂಬಂಧಿತ ಅಪರಾಧಗಳಿಗೆ ಮರಣದಂಡನೆ ವಿಧಿಸುವುದನ್ನು ನಿಷೇಧಿಸಿರುವುದು ಮತ್ತು ಅಪ್ರಾಪ್ತ ವಯಸ್ಕರಿಗೆ ಮರಣದಂಡನೆ ವಿಧಿಸುವುದನ್ನು ರದ್ದುಪಡಿಸಿರುವುದೇ ಇದಕ್ಕೆ ಕಾರಣ.
2020 ರಲ್ಲಿ ಸೌದಿಯಲ್ಲಿ 27 ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಇದು 2019 ಕ್ಕೆ ಹೋಲಿಸಿದರೆ ಶೇಕಡಾ 85ರಷ್ಟು ಕಡಿಮೆಯಾಗಿದೆ. ಮಾದಕವಸ್ತು ಸಂಬಂಧಿತ ಅಪರಾಧಗಳಿಗೆ ಮರಣದಂಡನೆ ವಿಧಿಸುವುದನ್ನು ನಿಷೇಧಿಸಿರುವುದು ಮರಣದಂಡನೆಯಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿದೆ. ಸೌದಿ ಅರೇಬಿಯಾ 2018ರಲ್ಲಿ ಬಾಲಾಪರಾಧಿಗಳ ಮರಣದಂಡನೆಯನ್ನು ರದ್ದುಪಡಿಸಿತ್ತು. ಕಳೆದ ವರ್ಷ ಛಡಿಯೇಟಿನ ಶಿಕ್ಷೆಯನ್ನು ಸೌದಿ ಕೈಬಿಟ್ಟಿತ್ತು. ಬದಲಾಗಿ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಈ ಶಿಕ್ಷೆಗಳನ್ನೆಲ್ಲಾ ರದ್ದುಪಡಿಸಿರುವುದು ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರ ಸುಧಾರಣೆಗಳ ಭಾಗವಾಗಿತ್ತು.
2019 ರ ಆಮ್ನೆಸ್ಟಿ ಅಂಕಿ ಅಂಶಗಳ ಪ್ರಕಾರ ಚೀನಾ ವಿಶ್ವದಲ್ಲೇ ಅತಿ ಹೆಚ್ಚು ಮರಣದಂಡನೆ ಶಿಕ್ಷೆ ವಿಧಿಸುವ ದೇಶವಾಗಿದೆ. ಚೀನಾದಲ್ಲಿ ವಿಧಿಸುವ ಹೆಚ್ಚಿನ ಮರಣದಂಡನೆ ಶಿಕ್ಷೆಗಳು ಹೊರಗಿನ ಪ್ರಪಂಚಕ್ಕೆ ತಿಳಿಯುವುದಿಲ್ಲ ಎಂದು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಹೇಳಿದೆ. ಮರಣದಂಡನೆ ವಿಧಿಸುವುದರಲ್ಲಿ ಇರಾನ್ ಎರಡನೇ, ಸೌದಿ ಅರೇಬಿಯಾ ಮೂರನೇ, ಇರಾಕ್ ನಾಲ್ಕನೇ ಮತ್ತು ಈಜಿಫ್ಟ್ ಐದನೇ ಸ್ಥಾನದಲ್ಲಿದೆ.