ಬೆಂಗಳೂರು: ದಿವಾಳಿಯಾಗಿದ್ದು ದೇಶವೂ ಅಲ್ಲ, ರಾಜ್ಯವೂ ಅಲ್ಲ ಬಿಜೆಪಿಗರ ಬೌದ್ಧಿಕತೆ ಎಂದು ಕರ್ನಾಟಕ ಬಿಜೆಪಿಗೆ ಕಾಂಗ್ರೆಸ್ ಟಾಂಗ್ ನೀಡಿದೆ.
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್, ” ಉದ್ಯೋಗ ಖಾತ್ರಿ ಕೊಟ್ಟಾಗ ದೇಶ ದಿವಾಳಿಯಾಗುತ್ತದೆ ಎಂದಿದ್ದರು. ಅನ್ನಭಾಗ್ಯ ಕೊಟ್ಟಾಗ ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದರು. ಆದರೆ ದಿವಾಳಿಯಾಗಿದ್ದು ದೇಶವೂ ಅಲ್ಲ, ರಾಜ್ಯವೂ ಅಲ್ಲ ಬಿಜೆಪಿಗರ ಬೌದ್ಧಿಕತೆ! ಜನರಿಗೆ ನೀಡುವ ಹಣ, ಭೂಮಿಗೆ ಬಿತ್ತುವ ಬೀಜ ವ್ಯರ್ಥವಾಗುವುದಿಲ್ಲ, ಬೆಳೆದು ಮರವಾಗಿ ಅರ್ಥವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತದೆ” ಎಂಬುದಾಗಿ ಹೇಳಿದೆ.
“ಜನರ ಕೈಗೆ ಹಣ ಹೋದರೆ ಜನರ ಖರೀದಿ ಸಾಮರ್ಥ್ಯ ಹೆಚ್ಚುತ್ತದೆ, ಬದುಕಿನ ಮಟ್ಟ ಸುಧಾರಿಸುತ್ತದೆ. ಇದರಿಂದ GDP ಬೆಳವಣಿಗೆಯಾಗುತ್ತದೆ, ತೆರಿಗೆ ಸಂಗ್ರಹಕ್ಕೂ ಅನುಕೂಲವಾಗುತ್ತದೆ. ಜನರ ಆರ್ಥಿಕ ಸಾಮರ್ಥ್ಯದಿಂದಲೇ ದೇಶದ ಆರ್ಥಿಕ ಸಾಮರ್ಥ್ಯ ವೃದ್ಧಿಸುವುದು. ನಮ್ಮ ಪ್ರಕಾರ ದೇಶ, ರಾಜ್ಯ ಎಂದರೆ ಇಲ್ಲಿನ ಜನರೇ ಎಂದಿದೆ”.
ರಾಹುಲ್ ಗಾಂಧಿಯವರು ಪದವೀಧರರಿದ್ದಾರೆ ಸರಿ, ಡಾ.ಯತೀಂದ್ರ ಅವರೂ ನೀವೇ ಹೇಳಿದಂತೆ ಡಾಕ್ಟರ್ ಆಗಿದ್ದಾರೆ. ಸ್ಮೃತಿ ಇರಾನಿ ಅವರ ಪದವಿ ಹುಡುಕಿ ತನ್ನಿ, ಹಾಗೆಯೇ ವಿಶ್ವದಲ್ಲಿ ಯಾವ ಯುನಿವರ್ಸಿಟಿಯಲ್ಲಿ ‘ಎಂಟೈರ್ ಪೊಲಿಟಿಕಲ್ ಸೈನ್ಸ್’ ಪದವಿ ಇದೆ ಎಂಬುದನ್ನೂ ಹುಡುಕಿ ತನ್ನಿ. ಅವರಿಗೂ ಭತ್ಯೆ ಕೊಡುವ ಬಗ್ಗೆ ಚಿಂತಿಸೋಣ! (ವಿ ಸೂ – ವಾಟ್ಸಾಪ್ ಯೂನಿವರ್ಸಿಟಿಯ ಪದವಿಯನ್ನು ಪರಿಗಣಿಸುವುದಿಲ್ಲ) ಎಂದು ಕಾಂಗ್ರೆಸ್ ವ್ಯಂಗವಾಡಿದೆ.