ಮಣಪ್ಪುರಂ ಫೈನಾನ್ಸ್ ಎಂಡಿಗೆ ಸೇರಿದ 143 ಕೋಟಿ ಮೌಲ್ಯದ ಆಸ್ತಿ ಇಡಿ ಮುಟ್ಟುಗೋಲು

Prasthutha|

ತಿರುವನಂತಪುರಂ(ಕೇರಳ): ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ( ಇಡಿ) ದ ಅಧಿಕಾರಿಗಳು ಮಣಪ್ಪುರಂ ಫೈನಾನ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯಾನಿರ್ವಹಣಾಧಿಕಾರಿ ವಿ.ಪಿ. ನಂದಕುಮಾರ್​ಗೆ ಸೇರಿದ 143 ಕೋಟಿ ರೂ ಮೊತ್ತದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

- Advertisement -

ಮಣಪ್ಪುರಂ ಫೈನಾನ್ಸ್ ಲಿ ಸಂಸ್ಥೆಯ ಮುಖ್ಯ ಕಚೇರಿಯಿರುವ ತ್ರಿಶೂರ್​ ನಲ್ಲಿ ಮೇ 3ಮತ್ತು 4ರಂದು 6 ಸ್ಥಳಗಳ ಮೇಲೆ ಇಡಿ  ಅಧಿಕಾರಿಗಳು ದಾಳಿ ನಡೆಸಿದ್ದರು.ಈ ವೇಳೆ ನಂದಕುಮಾರ್ ಅವರಿಗೆ ಸೇರಿದ ಎಂಟು ಬ್ಯಾಂಕ್ ಖಾತೆಗಳಲ್ಲಿ ಇಟ್ಟಿರುವ ಠೇವಣಿಗಳು, ಷೇರುಪೇಟೆಯಲ್ಲಿನ ಹೂಡಿಕೆ ಮತ್ತು ಮಣಪ್ಪುರಂ ಫೈನಾನ್ಸ್ ಸಂಸ್ಥೆಯಲ್ಲಿ ಅವರ ಪಾಲಿನ ಷೇರುಗಳು, 60 ಸ್ಥಿರಾಸ್ತಿಗಳ ದಾಖಲೆ ಇತ್ಯಾದಿಯನ್ನು ಜಾರಿ ನಿರ್ದೇಶನಾಲಯ ಫ್ರೀಜ್ ಮಾಡಿರುವುದು ತಿಳಿದುಬಂದಿದೆ.

ಆರ್ ​ಬಿಐನ ಸಮ್ಮತಿ ಇಲ್ಲದೆಯೇ ವಿ.ಪಿ. ನಂದಕುಮಾರ್ ಅವರು ಸಾರ್ವಜನಿಕರಿಂದ ಸುಮಾರು 150 ಕೋಟಿ ರೂ ಹಣ ಸಂಗ್ರಹಿಸಿದ್ದಾರೆ. ನಂದಕುಮಾರ್ ಮಾಲಿಕತ್ವದ ಮಣಪ್ಪುರಂ ಆಗ್ರೋ ಫಾರ್ಮ್ಸ್ ಮೂಲಕ ದೊಡ್ಡ ಪ್ರಮಾಣದಲ್ಲಿ ಹಣ ಕಲೆಹಾಕಲಾಗಿದೆ.

- Advertisement -

ಮಣಪ್ಪುರಂ ಫೈನಾನ್ಸ್​ನ ವಿವಿಧ ಶಾಖಾ ಕಚೇರಿಗಳಲ್ಲಿ ಈ ಕೆಲಸ ಮಾಡಲಾಗಿರುವುದು ತಿಳಿದುಬಂದಿದೆ. ಕಂಪನಿಯ ಸಿಎಫ್​ಒ ಹಾಗೂ ಕೆಲ ಉದ್ಯೋಗಿಗಳು ಅಕ್ರಮವಾಗಿ ಹಣ ಸಂಗ್ರಹಿಸುವ ಕೆಲಸ ಮಾಡಿರುವ ಆರೋಪ ಇದೆ.

ಆರ್ ​ಬಿಐಗೆ ಈ ಬಗ್ಗೆ ಗೊತ್ತಾಗಿ, 143 ಕೋಟಿ ರೂ ಹಣವನ್ನು ಸಾರ್ವಜನಿಕರಿಗೆ ಮರಳಿಸಬೇಕೆಂದು ಸೂಚಿಸಿತ್ತು. ತಾನು ಹಣವನ್ನು ಹಿಂದಿರುಗಿಸಿರುವುದಾಗಿ ಮಣಪ್ಪುರಂ ಫೈನಾನ್ಸ್ ಸಂಸ್ಥೆ ಸಿಇಒ ವಿ.ಪಿ. ನಂದಕುಮಾರ್ ಉತ್ತರ ನೀಡಿದ್ದರು.

ಇಡಿ ತನಿಖೆ ವೇಳೆ, ಸಾರ್ವಜನಿಕರಿಗೆ ಹಣ ಮರಳಿಸಿರುವ ಬಗ್ಗೆ ಯಾವುದೇ ದಾಖಲಾತಿ ಸಿಕ್ಕಿಲ್ಲ ಎನ್ನಲಾಗಿದೆ. 53 ಕೋಟಿ ರೂ ಹಣವನ್ನು ನಗದು ರೂಪದಲ್ಲಿ ಮರಳಿಸಿರುವುದಾಗಿ ಹೇಳಲಾಗಿತ್ತಾದರೂ ಅದಕ್ಕೂ ಯಾವುದೇ ಪುರಾವೆ ಸಿಕ್ಕಿಲ್ಲ.

ಇನ್ನು, ಜಾರಿ ನಿರ್ದೇಶನಾಲಯ ಹೇಳುವ ಪ್ರಕಾರ, ಸಾರ್ವಜನಿಕರಿಂದ ಅಕ್ರಮವಾಗಿ ಸಂಗ್ರಹಿಸಲಾದ ಹಣವನ್ನು ವಿ.ಪಿ. ನಂದಕುಮಾರ್ ಅವರು ತಮ್ಮ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ಸ್ಥಿರಾಸ್ತಿಗಳನ್ನು ಖರೀದಿಸಿದ್ದಾರೆ. ಹಾಗೂ ಮಣಪ್ಪುರಂ ಫೈನಾನ್ಸ್ ಸಂಸ್ಥೆಯ ಷೇರುಗಳ ಮೇಲೆಯೂ ಹೂಡಿಕೆ ಮಾಡಿದ್ದಾರೆನ್ನಲಾಗಿದೆ.

ಜಾರಿ ನಿರ್ದೇಶನಾಲಯ ಮೇ 3 ಮತ್ತು 4ರಂದು ತ್ರಿಶೂರ್​ನಲ್ಲಿರುವ ಮಣಪ್ಪುರಂ ಫೈನಾನ್ಸ್ ಸಂಸ್ಥೆಯ ಮುಖ್ಯ ಕಚೇರಿ, ನಂದಕುಮಾರ್ ಅವರ ಮನೆ ಇತ್ಯಾದಿ 6 ಸ್ಥಳಗಳ ಮೇಲೆ ರೇಡ್ ಮಾಡಿ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ, ಅಂತಿಮವಾಗಿ 143 ಕೋಟಿ ರೂ ಮೊತ್ತದ ಆಸ್ತಿಗಳನ್ನು ಫ್ರೀಜ್ ಮಾಡಿದೆ.

ಮಣಪ್ಪುರಂ ಷೇರು ಸಂಪತ್ತು ಕಾಲುಭಾಗದಷ್ಟು ಮಣ್ಣುಪಾಲು

ಇಡಿ ರೇಡ್ ಆಗುತ್ತಿರುವಂತೆಯೇ ಷೇರು ಮಾರುಕಟ್ಟೆಯಲ್ಲಿ ಮಣಪ್ಪುರಂ ಫೈನಾನ್ಸ್ ಸಂಸ್ಥೆಯ ಷೇರುಗಳು ಕಡಿಮೆ ಬೆಲೆಗೆ ಬಿಕರಿಯಾಗತೊಡಗಿವೆ. ಮೇ 2ರಂದು 130 ರೂ ಇದ್ದ ಷೇರು ಬೆಲೆ ಇದೀಗ 100 ರೂ ಆಸುಪಾಸಿನಲ್ಲಿ ವಹಿವಾಟು ಆಗುತ್ತಿದೆ. ಕಳೆದ ಮೂರ್ನಾಲ್ಕು ದಿನದಲ್ಲಿ 28 ರೂಗಳಿಗೂ ಹೆಚ್ಚು (ಶೇ. 23) ಕುಸಿತ ಕಂಡಿದೆ.



Join Whatsapp