ಇಂಫಾಲ್: ಮುಖ್ಯಮಂತ್ರಿ ಬೈರೆನ್ ಸಿಂಗ್ ಭಾಗವಹಿಸಬೇಕಿದ್ದ ಸ್ಥಳಕ್ಕೆ ಬುಡಕಟ್ಟು ಜನಾಂಗದ ಗುಂಪೊಂದು ಬೆಂಕಿ ಹಚ್ಚಿದ ಘಟನೆ ಮಣಿಪುರದ ಚುರಾಚಂದ್ಪುರ ಜಿಲ್ಲೆಯಲ್ಲಿ ನಡೆದಿದೆ.
ರಾಜಧಾನಿ ಇಂಫಾಲ್ ನಿಂದ 63 ಕಿ.ಮೀ ದೂರದಲ್ಲಿರುವ ಚುರಾಚಂದ್ಪುರ ಜಿಲ್ಲೆಯಲ್ಲಿ ಜಿಮ್ ಮತ್ತು ಕ್ರೀಡಾ ಕೇಂದ್ರವನ್ನು ಉದ್ಘಾಟಿಸಲು ತೆರಳುತ್ತಿದ್ದಾಗ ಮುಖ್ಯಮಂತ್ರಿಯ ಸ್ಥಳಕ್ಕೆ ಬೆಂಕಿ ಹಚ್ಚಲಾಗಿದೆ.
ಬುಡಕಟ್ಟು ಪ್ರದೇಶಗಳಲ್ಲಿನ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದ್ದು, ಸರ್ಕಾರವು ತಮ್ಮನ್ನು ಅವಮಾನಿಸಿದೆ ಎಂದು ಆರೋಪಿಸಿ ಬುಡಕಟ್ಟು ಸಂಘಟನೆಗಳು ಮುಖ್ಯಮಂತ್ರಿಯ ವೇದಿಕೆಗೆ ಬೆಂಕಿ ಹಚ್ಚಿವೆ.
ಬಿಜೆಪಿ ಸರ್ಕಾರ ಸಂರಕ್ಷಿತ ಅರಣ್ಯಗಳು ಮತ್ತು ಗದ್ದೆಗಳ ಸಮೀಕ್ಷೆ ನಡೆಸುವುದನ್ನು ವಿರೋಧಿಸಿರುವ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಈ ಪ್ರತಿಭಟನೆಯ ನೇತೃತ್ವ ವಹಿಸಿದೆ.
ಉದ್ರಿಕ್ತ ಗುಂಪು ಉದ್ಘಾಟನಾ ಸಮಾರಂಭದಲ್ಲಿ ಕುರ್ಚಿಗಳನ್ನು ಒಡೆದು ಇತರ ವಸ್ತುಗಳನ್ನು ನಾಶಪಡಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಘರ್ಷಣೆಗಳು ಭುಗಿಲೆದ್ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.