ವಾಷಿಂಗ್ಟನ್: ಈದ್ ನಮಾಝ್ ನಿರ್ವಹಿಸುತ್ತಿದ್ದ ಮಸೀದಿಗೆ ನುಗ್ಗಿ ದಾಂಧಲೆವೆಬ್ಬಿಸಿದ ಮಹಿಳೆ ಹಿಂದೂವಲ್ಲ, ಆಕೆ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಮಹಿಳೆ ಎಂದು ಮಸೀದಿ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಈ ಘಟನೆ ಅಮೆರಿಕಾದ ವರ್ಜೀನಿಯಾದ ಆಡಮ್ಸ್ ಸೆಂಟರ್’ನಲ್ಲಿ ನಡೆದಿತ್ತು. ಈ ಸಂಬಂಧದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಾತ್ರವಲ್ಲ ಆಕೆ ಭಾರತದ ಹಿಂದೂ ಮಹಿಳೆ ಎಂದು ಉಲ್ಲೇಖಿಸಲಾಗಿತ್ತು.
ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಹಿಳೆಯಾಗಿದ್ದು, ಮಹಿಳೆಯ ವಿಡಿಯೋವನ್ನು ತಪ್ಪಾಗಿ ಬಳಸದಂತೆ ಮಂಡಳಿಯು ಮನವಿ ಮಾಡಿದೆ.
ಈ ಬಗ್ಗೆ ಫೇಸ್ಬುಕ್ ಪೇಜ್’ನಲ್ಲಿ ಪೋಸ್ಟ್ ಹಾಕಿರುವ ಆಡಮ್ಸ್ ಮಂಡಳಿ, ‘ವರ್ಜೀನಿಯಾದ ADAMS ಮಸೀದಿಯಲ್ಲಿ, ಈದ್ ಪ್ರಾರ್ಥನೆಯ ಸಮಯದಲ್ಲಿ ಶುಕ್ರವಾರ, ಎ. 21 ರಂದು ನಡೆದ ಇತ್ತೀಚಿನ ಘಟನೆಯು ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಮುಸ್ಲಿಂ ಸಮುದಾಯದ ಮಹಿಳೆಯಿಂದ ನಡೆದಿದೆ’ ಎಂದು ತಿಳಿಸಿದೆ.