ಬೆಂಗಳೂರು: ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ರಾಮನಗರ ಜಿಲ್ಲೆಯ ಕನಕಪುರದಲ್ಲಿ ಇಂದು ನಾಮ ಪತ್ರ ಸಲ್ಲಿಸಿದ್ದಾರೆ. ಈ ವೇಳೆ ಜನಸಾಗರವೇ ಹರಿದು ಬಂದಿದೆ. ಕನಪುರದಲ್ಲಿ ನಾಮಪತ್ರ ಸಲ್ಲಿಕೆಗೂ ಮೊದಲು ಪ್ರಸಿದ್ದ ಕೆಂಕೇರಮ್ಮ ದೇವಸ್ಥಾನದಲ್ಲಿ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್ ಹಾಗೂ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅವರೆಲ್ಲರೂ ನಾಮಪತ್ರ ಸಲ್ಲಿಸಲು ಕಚೇರಿಗೆ ತೆರಳಿರು. ಈ ಸಂದರ್ಭದಲ್ಲಿ ನೆರೆದಿದ್ದ ಅಪಾರ ಜನಸ್ತೋಮ ಡಿಕೆಶಿ ಪರ ಘೋಷಣೆಯನ್ನು ಕೂಗಿದೆ.
ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಅವರು ಇಂದು ನಾಮ ಪತ್ರ ಸಲ್ಲಿಸಿದ್ದಾರೆ. ಮಡಿಕೇರಿ ಕ್ಷೇತ್ರದ ಚುನಾವಣಾಧಿಕಾರಿ ಯತೀಶ್ ಉಳ್ಳಾಲ್ ಅವರಿಗೆ ನಾಮಪತ್ರ ಡಾ.ಮಂಥರ್ ಗೌಡ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಸಂದರ್ಭ ಡಾ.ಮಂಥರ್ ಗೌಡ ಅವರ ಪತ್ನಿ ದಿವ್ಯಾ ಮಂಥರ್ ಗೌಡ, ಕೆಪಿಸಿಸಿ ಮುಖಂಡರಾದ ಹೆಚ್.ಎಸ್.ಚಂದ್ರಮೌಳಿ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್ ಕುಮಾರ್ ಭಾಗಿಯಾಗಿದ್ದರು.
ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿಯಾದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಕಾರ್ಯಕರ್ತರೊಂದಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಹಳೇ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಂಡು ಬಂತು. ತಾಲೂಕು ಕಚೇರಿಗೆ ಆಗಮಿಸಿ ಬೆಂಬಲಿಗರೊಡನೆ ನಾಮಪತ್ರ ಸಲ್ಲಿಸಿದರು.
ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ತಾಲ್ಲೂಕು ಕಚೇರಿ ಮುಂಭಾಗ ಜೆಡಿಎಸ್ ಹಾಗೂ ಕಾಂಗ್ರೇಸ್ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲು ಆಗಮಿಸಿದ ವೇಳೆ ಡಿಕೆ… ಡಿಕೆ… ಎಂದು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.
ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ನಂಜನಗೂಡು ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದರಾದ ವಿ.ಶ್ರೀನಿವಾಸಪ್ರಸಾದ್, ಪ್ರತಾಪ ಸಿಂಹ ಸಾಥ್ ನೀಡಿದರು.
ಬೆಳ್ತಂಗಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಕ್ಷಿತ್ ಶಿವರಾಮ್, ಬಿಜೆಪಿಯಿಂದ ಹರೀಶ್ ಪೂಂಜ ನಾಮಪತ್ರ ಸಲ್ಲಿಸಿದರು. ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಿಥುನ್ ಎಂ ರೈ, ಅಖಂಡ ಶ್ರೀನಿವಾಸಮೂರ್ತಿ ಬೆಂಗಳೂರಿನ ಪುಲಕೇಶಿನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಉಳ್ಳಾಲ ಕ್ಷೇತ್ರದಿಂದ ರಿಯಾಝ್ ಫರಂಗಿಪೇಟೆ ಎಸ್ ಡಿಪಿಐ ಅಭ್ಯರ್ಥಿಯಾಗಿ ಹಾಗೂ ಬಂಟ್ವಾಳ ಕ್ಷೇತ್ರದಿಂದ ಎಸ್ ಡಿಪಿಐ ಅಭ್ಯರ್ಥಿಯಾಗಿ ಇಲ್ಯಾಸ್ ಮುಹಮ್ಮದ್ ತುಂಬೆ ಸೋಮವಾರ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವಾಗ ಎಸ್ ಡಿಪಿಐ ರಾಷ್ಟ್ರೀಯ ಚುನಾವಣಾ ವೀಕ್ಷಕ ವಿ ಎಂ ಫೈಝಲ್, ಎಸ್’ಡಿಪಿಐ ಬಂಟ್ವಾಳ ಕ್ಷೇತ್ರಾಧ್ಯಕ್ಷ ಮೂನಿಷ್ ಆಲಿ, ಎಸ್’ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಯೂಸುಫ್ ಆಲಡ್ಕ, ಎಸ್’ಡಿಪಿಐ ಬಂಟ್ವಾಳ ಚುನಾವಣಾ ಉಸ್ತುವಾರಿ ಶಾಹುಲ್ ಹಮೀದ್ ಎಸ್ ಎಚ್ ಉಪಸ್ಥಿತರಿದ್ದರು.