ಹೊಸದಿಲ್ಲಿ: ಮಾಜಿ ಸಂಸದ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಪತ್ರಕರ್ತರು ಮತ್ತು ಪೊಲೀಸರ ಸಮ್ಮುಖದಲ್ಲೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬುದಕ್ಕೆ ಇದಕ್ಕಿಂದ ದೊಡ್ಡ ಉದಾಹರಣೆ ಬೇಕಿಲ್ಲ ಎಂದು ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಘಟನೆಯನ್ನು ಖಂಡಿಸಿದ್ದು, ಭಾರತದ ಅತೀ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಅಧಃಪತನಕ್ಕೆ ಇಳಿದಿರುವುದನ್ನು ಕಂಡು ತುಂಬಾ ಆಘಾತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
‘ಲಜ್ಜೆಗೆಟ್ಟ ಅರಾಜಕತೆ ಕಂಡು ಆಘಾತಕ್ಕೊಳಗಾಗಿದ್ದೇನೆ. ಉತ್ತರ ಪ್ರದೇಶದಲ್ಲಿ ಅಪರಾಧಿಗಳು ಕಾನೂನನ್ನು ಕೈಗೆತ್ತಿಕೊಂಡಿದ್ದಲ್ಲದೇ ಮಾಧ್ಯಮದವರು ಮತ್ತು ಪೊಲೀಸರ ಎದುರೇ ಒಂಚೂರು ವಿಚಲಿತರಾಗದೆ ಹತ್ಯೆ ಮಾಡಿದ್ದಾರೆ. ಇಂತಹ ಕಾನೂನುಬಾಹಿರ ಕೃತ್ಯಗಳಿಗೆ ನಮ್ಮ ಸಂವಿಧಾನದಲ್ಲಿ ಸ್ಥಾನವಿಲ್ಲ‘ ಎಂದು ಟ್ವೀಟ್ ಮಾಡಿ ಯುಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಈ ಮಧ್ಯೆ ಘಟನೆ ಸಂಬಂಧ ತನಿಖೆಗಾಗಿ ಮೂವರು ಸದಸ್ಯರ ನೇತೃತ್ವದಲ್ಲಿ ಜುಡಿಷಿಯಲ್ ತನಿಖೆಗೆ ಉತ್ತರ ಪ್ರದೇಶದ ಸರ್ಕಾರ ಆದೇಶಿಸಿದೆ.