ಬೆಂಗಳೂರು: ಬೆಂಗಳೂರಿನ ದೇವರಜೀವನಹಳ್ಳಿ (ಡಿ.ಜೆ. ಹಳ್ಳಿ) ಮತ್ತು ಕಾಡುಗೊಂಡನಹಳ್ಳಿಯಲ್ಲಿ (ಕೆ. ಜಿ. ಹಳ್ಳಿ) ನಡೆದಿದ್ದ ಗಲಭೆ ಪ್ರಕರಣದಲ್ಲಿ ಆರೋಪಿಗಳಾಗಿರುವವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್’ಗಳ ಅಡಿ ಸಂಜ್ಞೇಯ ಪರಿಗಣಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್’ಐಎ) ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
ಬೆಂಗಳೂರಿನವರಾದ ಪ್ರಕರಣದಲ್ಲಿ 25ನೇ ಆರೋಪಿಯಾಗಿರುವ ಮುಹಮ್ಮದ್ ಶರೀಫ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ತಿರಸ್ಕರಿಸಿದೆ.
“ಸ್ಫೋಟಕಗಳು ಮತ್ತು ದಹಿಸಬಲ್ಲ ವಸ್ತುಗಳಿಂದ ವಾಹನಗಳನ್ನು ಸುಡಲಾಗಿದ್ದು, ಇದರಿಂದ ಸಾರ್ವಜನಿಕ ಆಸ್ತಿಗೆ ಹಾನಿ ಅಥವಾ ನಷ್ಟ ಉಂಟು ಮಾಡಲಾಗಿದೆ. ಆ ಮೂಲಕ ದೇಶದ ಒಂದು ವ್ಯಾಪ್ತಿಯ ಭದ್ರತೆಗೆ ಭಂಗ ಉಂಟು ಮಾಡಲಾಗಿದೆ. ಇದು ಯುಎಪಿಎ ಸೆಕ್ಷನ್ 15ರ ವ್ಯಾಪ್ತಿಗೆ ಒಳಪಡಲಿದೆ. ನ್ಯಾಯಾಲಯದ ದೃಷ್ಟಿಯಲ್ಲಿ ಮೇಲ್ನೋಟಕ್ಕೆ ಇಲ್ಲಿ ಪ್ರಕರಣ ಇದೆ ಎಂದೆನಿಸಿದೆ. ಪ್ರಕರಣವು ಇನ್ನಷ್ಟೇ ಸಾಕ್ಷಿಯ ಹಂತಕ್ಕೆ ತಲುಪಬೇಕಿದ್ದು, ಈ ಸಂದರ್ಭದಲ್ಲಿ ಅರ್ಜಿದಾರರ ಪಾತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದರಿಂದ ಸಂಬಂಧಿತ ನ್ಯಾಯಾಲಯದಲ್ಲಿನ ಪ್ರಕರಣದ ಮೇಲೆ ಪೂರ್ವಗ್ರಹ ಉಂಟಾಗಲಿದೆ” ಎಂದು ನ್ಯಾಯಾಲಯ ಹೇಳಿದೆ.
“ಯುಎಪಿಎ ಕಾಯಿದೆ ಸೆಕ್ಷನ್ 15 ಅನ್ನು ಪ್ರತ್ಯೇಕಿಸಿ ನೋಡಲಾಗದು. ಅದನ್ನು ಕಾಯಿದೆಯ ಸೆಕ್ಷನ್ 16 ಮತ್ತು 18ರ ಜೊತೆಗೇ ಓದಬೇಕಿದೆ. ಅರ್ಜಿದಾರರ ವಿರುದ್ಧದ ಆರೋಪಗಳು ಕಾಯಿದೆಯ ಸೆಕ್ಷನ್ 15ಕ್ಕೆ ಪೂರಕವಾಗಿರುವಾಗ ಆರೋಪಿತ ಅಪರಾಧಗಳು ಮೇಲ್ನೋಟಕ್ಕೆ ಕಂಡುಬಂದಿವೆ” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಮುಹಮ್ಮದ್ ತಾಹೀರ್ ಅವರು “ಎನ್’ಐಎ ಕಾಯಿದೆ ಅಡಿ ಬರುವಂಥ ಯಾವುದೇ ತೆರನಾದ ಆರೋಪಗಳು ಅರ್ಜಿದಾರರ ವಿರುದ್ಧ ಇಲ್ಲ. ಹೀಗಾಗಿ, ಕಾಯಿದೆ ಅಡಿ ಅವರ ವಿರುದ್ಧ ಯಾವುದೇ ಆರೋಪ ಮಾಡಲಾಗದು. ಐಪಿಸಿ ಅಡಿ ಆರೋಪಗಳನ್ನು ಅರ್ಜಿದಾರರ ವಿರುದ್ಧ ಮಾಡಬಹುದಾಗಿದ್ದು, ವ್ಯಾಪ್ತಿ ಹೊಂದಿದ ನ್ಯಾಯಾಲಯದಲ್ಲಿ ಅವರ ವಿರುದ್ಧ ವಿಚಾರಣೆ ನಡೆಸಬಹುದಾಗಿದೆ. ಮ್ಯಾಜಿಸ್ಟ್ರೇಟ್ ಅಥವಾ ಸತ್ರ ನ್ಯಾಯಾಧೀಶರು ವಿಚಾರಣೆ ನಡೆಸಬಹುದಾಗಿದೆ. ಎನ್’ಐಎ ನ್ಯಾಯಾಲಯ ವಿಚಾರಣೆ ನಡೆಸುವುದು ಕಾನೂನಿಗೆ ವಿರುದ್ಧವಾಗಿದೆ. ಈ ನೆಲೆಯಲ್ಲಿ ಎನ್’ಐಎ ನ್ಯಾಯಾಲಯದಲ್ಲಿನ ಪ್ರಕ್ರಿಯೆ ವಜಾ ಮಾಡಬೇಕು” ಎಂದು ಕೋರಿದ್ದರು.
ಎನ್’ಐಎ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು “ಕಾಯಿದೆಯ ಸೆಕ್ಷನ್ 15ರ ಅಡಿ ಉಲ್ಲೇಖಿಸಿರುವಂತೆ ಅರ್ಜಿದಾರರು ಸೇರಿದಂತೆ ಇತರೆ ಆರೋಪಿಗಳ ವಿರುದ್ಧದ ಆರೋಪಗಳು ಭಯೋತ್ಪಾದನಾ ಕೃತ್ಯ ವ್ಯಾಖ್ಯಾನದ ಅಡಿ ಬರುತ್ತವೆ. ಅರ್ಜಿದಾರರು ಯಾವ ಪಾತ್ರ ನಿಭಾಯಿಸಿದ್ದಾರೆ ಎಂಬುದು ಆರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿದ್ದು, ಅದರ ಸಂಜ್ಞೇಯವನ್ನು ವಿಶೇಷ ನ್ಯಾಯಾಲಯ ತೆಗೆದುಕೊಂಡಿದೆ. 2022ರ ಮಾರ್ಚ್ 30ರಂದು ಹೈಕೋರ್ಟ್ನ ವಿಭಾಗೀಯ ಪೀಠವು ಅರ್ಜಿದಾರರಿಗೆ ಜಾಮೀನು ನಿರಾಕರಿಸಿದೆ. ಹೀಗಾಗಿ, ಶರೀಫ್ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು” ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿ ನವೀನ್ ಎಂಬಾತನ ಫೇಸ್ ಬುಕ್ ನಲ್ಲಿ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಅವರನ್ನು ಬಂಧಿಸಬೇಕು ಎಂದು ಮುಸ್ಲಿಮ್ ಸಮುದಾಯದ ಹಲವರು ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು. ಪೊಲೀಸರು ಮನವಿಯ ಹೊರತಾಗಿಯೂ ಉದ್ರಿಕ್ತರ ಗುಂಪು ಚದುರದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಉದ್ರಿಕ್ತರು ಠಾಣೆಗಳ ಮೇಲೆ ಕಲ್ಲು ಮತ್ತು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಘಟನೆಯಲ್ಲಿ ಪೊಲೀಸರು ಸೇರಿದಂತೆ ಹಲವು ನಾಗರಿಕರು ಗಾಯಗೊಂಡಿದ್ದರು.
ಉದ್ರಿಕ್ತರ ಗುಂಪು ಠಾಣೆಯ ಮುಂದೆ ಇದ್ದ ವಾಹನಗಳನ್ನು ದಹಿಸಿತ್ತು. ಹೀಗಾಗಿ, ಕೆ ಜಿ ಹಳ್ಳಿ ಮತ್ತು ಡಿ ಜೆ ಹಳ್ಳಿ ಠಾಣೆಗಳಲ್ಲಿ ಹಲವರ ವಿರುದ್ಧ ಐಪಿಸಿ ಸೆಕ್ಷನ್’ಗಳಾದ 143, 147, 148, 353, 333, 332, 436, 427 & 149ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಆನಂತರ ಪ್ರಕರಣವನ್ನು ಎನ್’ಐಎ ವಹಿಸಲಾಗಿತ್ತು. ಬಳಿಕ ಸಾರ್ವಜನಿಕ ಆಸ್ತಿಗೆ ಹಾನಿ ನಿಯಂತ್ರಣ ಕಾಯಿದೆ ಸೆಕ್ಷನ್ 4ರ ಮತ್ತು ಯುಎಪಿಎ ಸೆಕ್ಷನ್’ಗಳಾದ 15, 16, 18 ಮತ್ತು 20ರ ಅಡಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಸಂಬಂಧ ಎನ್’ಐಎ ನ್ಯಾಯಾಲಯವು ಸಂಜ್ಞೇ ಪರಿಗಣಿಸಿ, ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
(ಕೃಪೆ: ಬಾರ್ & ಬೆಂಚ್)