ವಾಷಿಂಗ್ಟನ್: ಪೋರ್ನ್ ಸಿನಿಮಾ ನಟಿ ಸ್ಟಾರ್ಮಿ ಡೇನಿಯಲ್ಸ್’ಗೆ ಹಣ ಸಂದಾಯ ಮಾಡಿರುವ ಕಾರಣಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ಮ್ಯಾನ್ ಹಟ್ಟನ್ ಕೋರ್ಟ್ ಸುತ್ತ ನಿನ್ನೆಯೇ ಬ್ಯಾರಿ ಕೇಡ್ ಗಳನ್ನು ನಿಲ್ಲಿಸಲಾಗಿದೆ. ಜನವರಿ 6, 2021ರಂದು ಟ್ರಂಪ್ ವಾಷಿಂಗ್ಟನ್ ಮೇಲೆ ದಾಳಿ ಮಾಡಿ ಎಂದು ಕರೆ ಕೊಟ್ಟಿದ್ದಾಗ ಹಿಂಸಾಚಾರ ನಡೆದಿತ್ತು. ಮೊನ್ನೆ ಸಹ ಟ್ರಂಪ್ ಅವರು ನನ್ನ ಬಂಧನವಾದರೆ ರಸ್ತೆಗಿಳಿದು ಪ್ರತಿಭಟಿಸುವಂತೆ ಹಿಂಬಾಲಕರಿಗೆ ಕರೆ ನೀಡಿದ್ದರು.
ಆದರೆ ವಿಷಯ ಗಂಭೀರವಾಗಿರುವುದರಿಂದ ಪಕ್ಷದ ಹಿರಿಯರು ಟ್ರಂಪ್ ಮಾತು ಕಡೆಗಣಿಸಲು ತೀರ್ಮಾನಿಸಿದ್ದಾರೆ. 2024ರಲ್ಲಿ ಮತ್ತೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಸ್ಪರ್ಧಿ ಆಗಲು ನೋಡುತ್ತಿರುವ ಟ್ರಂಪ್’ಗೆ ಇದು ದೊಡ್ಡ ಹೊಡೆತವಾಗಿದೆ.
ಟ್ರಂಪ್ ನಿರ್ದೇಶನದಂತೆ ನಾನು ನಗ್ನ ತಾರೆಗೆ ಹಣ ನೀಡಿದ್ದಾಗಿ ಮೈಕೆಲ್ ಕೋಹೆನ್ ಹೇಳಿದ್ದಾರೆ. 2018ರಲ್ಲಿ ಹಣದ ಅವ್ಯವಹಾರಕ್ಕಾಗಿ ಕೋಹೆನ್ ತಪ್ಪಿತಸ್ಥ ಆಗಿದ್ದಾರೆ.
ರಿಪಬ್ಲಿಕನ್ ಪಕ್ಷದ 44% ನಾಯಕರು ಟ್ರಂಪ್ ಅಧ್ಯಕ್ಷೀಯ ಸ್ಪರ್ಧಿ ಆಗುವುದರಿಂದ ಹಿಂದೆ ಸರಿಯಲಿ ಎಂದು ಹೇಳುತ್ತಿದ್ದಾರೆ.
ಜಾಲತಾಣಗಳು ಪರಿಸ್ಥಿತಿಗೆ ಕಿಚ್ಚಿಡುತ್ತಿವೆ. ಎಲ್ಲ ಬಗೆಯ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಹೇಳಿದರು.
2016ರಲ್ಲಿ ಕೊನೆಯ ಕ್ಷಣದಲ್ಲಿ ವಯಸ್ಕರ ಸಿನಿಮಾ ನಟಿ ಡೇನಿಯಲ್ಸ್ ಗೆ 1,30,000 ಡಾಲರ್ ಪೇಮೆಂಟ್ ಆಗಿರುವುದು ಕಂಡು ಬಂದಿದೆ.
ಟ್ರಂಪ್ ಬೆಂಬಲಿಗ ಫ್ಲೋರಿಡಾ ಗವರ್ನರ್ ರೋನ್ ಡೆಸಾಂಟಿಸ್ ಸಹಿತ ಕೆಲವರು ಇದು ರಾಜಕೀಯ ಪ್ರೇರಿತ ಎನ್ನುತ್ತಿದ್ದಾರೆ.
ಉಕ್ರೇನ್ ಹೇಳಿಕೆ ಸಂಬಂಧ ಮತ್ತು ವಾಷಿಂಗ್ಟನ್ ಮೇಲೆ ದಾಳಿ ಹೇಳಿಕೆ ಸಂಬಂಧ ಅಮೆರಿಕದ ಸೆನೆಟ್ ಟ್ರಂಪ್ ರನ್ನು ತಪ್ಪಿತಸ್ಥ ಎಂದು ವಾಗ್ದಂಡನೆ ವಿಧಿಸಿತ್ತು.