ರೂ. 2 ಕೋಟಿಗೆ ವಿಷ್ಣು ರೂಪದ ಅದೃಷ್ಟದ ಕಲ್ಲುಗಳನ್ನು ಮಾರಲು ಯತ್ನ: ಇಬ್ಬರ ಬಂಧನ

Prasthutha|

ಬೆಂಗಳೂರು: ಸಾರ್ವಜನಿಕರಿಗೆ ಅದೃಷ್ಟದ ‘ಸಾಲಿಗ್ರಾಮ’ ಕಲ್ಲುಗಳೆಂದು ಸುಳ್ಳು ಹೇಳಿ 2 ಕೋಟಿ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

- Advertisement -

‘ಬಂಧನಕ್ಕೊಳಗಾದವರು ಮಹಾರಾಷ್ಟ್ರದ ಮನೋಜ್ (57) ಮತ್ತು ಆದಿತ್ಯ ಸಾಗರ್ (37) ಎಂದು ಗುರುತಿಸಲಾಗಿದೆ. ಇವರಿಂದ ಎರಡು ಕಲ್ಲುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಜಂಟಿ ಕಮಿಷನರ್ ಎಸ್.ಡಿ. ಶರಣಪ್ಪ ಹೇಳಿದರು.

‘ಗುಜರಾತ್‌ನ ಗೋಮತಿ ನದಿಯಲ್ಲಿ ಎರಡು ಸಾಲಿಗ್ರಾಮ ಕಲ್ಲುಗಳು ಸಿಕ್ಕಿವೆ. ಇವು ವಿಷ್ಣು ರೂಪದ ಅದೃಷ್ಟದ ಕಲ್ಲುಗಳು’ ಎಂಬುದಾಗಿ ಆರೋಪಿಗಳು ತಿಳಿಸಿದ್ದರು.’ ‘ನಗರಕ್ಕೆ ಇತ್ತೀಚೆಗೆ ಬಂದಿದ್ದ ಆರೋಪಿಗಳು, ರಾಜಾಜಿನಗರ ಠಾಣೆ ವ್ಯಾಪ್ತಿಯ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದರು. ಕೆಲ ಗ್ರಾಹಕರನ್ನು ಸಂಪರ್ಕಿಸಿ ಹೋಟೆಲ್‌ಗೆ ಕರೆಸಿದ್ದರು. “ಬಟ್ಟೆಯೊಳಗೆ ಕಲ್ಲು ಇರಿಸಿ ಅದರ ಮೇಲೆ ಕರ್ಪೂರ ಇರಿಸಿದ್ದರು. ಪೆಟ್ರೋಲ್ ಸಹ ಸುರಿದಿದ್ದರು. ಬೆಂಕಿ ಹಚ್ಚಲು ಯತ್ನಿಸಿದ್ದರು. ಆದರೆ, ಬೆಂಕಿ ಹೊತ್ತಿಕೊಂಡಿರಲಿಲ್ಲ. ಇದುವೇ ಪವಾಡವೆಂದು ಹೇಳಿದ್ದ ಆರೋಪಿಗಳು,  2 ಕೋಟಿ ರೂಪಾಯಿಗೆ ಕಲ್ಲು ಮಾರುವುದಾಗಿ ತಿಳಿಸಿದ್ದರು. ಇದನ್ನು ನಂಬಿದ್ದ ಜನ, ಕಲ್ಲುಗಳ ಖರೀದಿ ಸಂಬಂಧ ಮಾತುಕತೆ ನಡೆಸುತ್ತಿದ್ದರು’ ಎಂದು ಶರಣಪ್ಪ ತಿಳಿಸಿದರು. ‘ವಂಚನೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಗ್ರಾಹಕರ ವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ರಾಸಾಯನಿಕ ಸಿಂಪಡಿಸಿದ್ದ ಬಟ್ಟೆಯೊಳಗೆ ಆರೋಪಿಗಳು ಕಲ್ಲು ಇರಿಸಿದ್ದರು. ಹೀಗಾಗಿ, ಬಟ್ಟೆಗೆ ಬೆಂಕಿ ಹೊತ್ತಿಕೊಂಡಿರಲಿಲ್ಲ. ಇದುವೇ ಪವಾಡವೆಂದು ಹೇಳಿ ಜನರನ್ನು ನಂಬಿಸಿದ್ದರು’ ಎಂದು ಹೇಳಿದರು.



Join Whatsapp