ಸರಕಾರದ ವಿರುದ್ಧ ಸಂಸತ್’ನಲ್ಲಿ ಮಾತನಾಡುವಾಗ ಆಡಿಯೋ ಮ್ಯೂಟ್ ಮಾಡಲಾಗುತ್ತಿದೆ: ಕಾಂಗ್ರೆಸ್ ಆರೋಪ

Prasthutha|

ನವದೆಹಲಿ: ಲೋಕಸಭೆಯಲ್ಲಿ ಪ್ರತಿ ಪಕ್ಷ ಸದಸ್ಯರು ಸರಕಾರವನ್ನು ಪ್ರತಿಭಟಿಸಿ ಟೀಕಿಸುವಾಗ ಆಡಿಯೋ ಮ್ಯೂಟ್ ಮಾಡಿ ವಂಚಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

- Advertisement -


ಪ್ರತಿಪಕ್ಷಗಳ ಸದಸ್ಯರು ಪ್ರತಿಭಟಿಸುವಾಗ ಧ್ವನಿಯೇ ಕೇಳಿಸದ ಒಂದು ವೀಡಿಯೋ ಕ್ಲಿಪ್ಪಿಂಗನ್ನು ಸಹ ಕಾಂಗ್ರೆಸ್ ಟ್ವಿಟರ್ ಮೂಲಕ ಹಂಚಿಕೊಂಡಿದೆ.
ವೀಡಿಯೋದಲ್ಲಿ ಸ್ಪೀಕರ್ ಓಂ ಬಿರ್ಲಾ ಸುತ್ತ ಸೇರಿ ಪ್ರತಿಪಕ್ಷಗಳ ಸಂಸದರು ಪ್ರತಿಭಟಿಸುತ್ತಿದ್ದಾರೆ, ಎಲ್ಲರೂ ತುದಿಗಾಲಲ್ಲಿ ನಿಂತಿದ್ದರೂ ವೀಡಿಯೋದಲ್ಲಿ ಮಾತ್ರ ಮ್ಯೂಟ್ ಇದೆ. ಸುಮಾರು 20 ನಿಮಿಷಗಳ ಕಾಲ ಆಡಿಯೋವೇ ಇಲ್ಲ. ಆಮೇಲೆ ಆಡಿಯೋ ಬರುತ್ತದೆ. ಸ್ಪೀಕರ್ ಕೂಗಾಟ ನಿಲ್ಲಿಸಿ ಎನ್ನುತ್ತಾರೆ ಸಂಸತ್ತನ್ನು ದಿನ ಕಾಲ ಮುಂದೂಡಿದ್ದಾಗಿ ಘೋಷಿಸುತ್ತಾರೆ.
ಲೋಕಸಭೆಯಲ್ಲಿ ಯಾಕೆ ಸದ್ದು ಕೇಳಿಸಲಿಲ್ಲ ಎನ್ನುವುದಕ್ಕೆ ಸರಕಾರ ವಿವರಣೆ ನೀಡಿಲ್ಲ.


“ಹಿಂದೆ ಮೈಕ್ ಆಪ್ ಆಗುತ್ತಿತ್ತು. ಈಗ ಲೋಕಸಭೆಯ ಕಲಾಪವೇ ಸದ್ದಿಲ್ಲದ್ದಾಗಿದೆ. ಪ್ರಧಾನಿ ಮೋದಿಯವರ ಮಿತ್ರರಿಗಾಗಿ ಲೋಕಸಭೆ ಮ್ಯೂಟ್ ಆಗಿದೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ವಿರೋಧ ಪಕ್ಷಗಳ ಸದಸ್ಯರು, ಅದಾನಿ- ಹಿಂಡೆನ್ ಬರ್ಗ್ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಲು ಒತ್ತಾಯಿಸುವಾಗ ಕಲಾಪ ಮ್ಯೂಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ರಾಹುಲ್ ಗಾಂಧಿಯವರನ್ನು ಲೋಕ ಸಭೆಯಲ್ಲಿ ಮಾತನಾಡಲು ಬಿಡಬಾರದು ಎಂಬ ಷಡ್ಯಂತ್ರವನ್ನು ಬಿಜೆಪಿ ಮಾಡುತ್ತಿದೆ ಎಂದೂ ಕಾಂಗ್ರೆಸ್ ಆಪಾದಿಸಿದೆ.
ರಾಜ್ಯ ಸಭೆಯಲ್ಲಿ ಕಳೆದ ತಿಂಗಳು ಪ್ರಧಾನಿ ಮೋದಿಯವರು ಅಲ್ಲಿ ಉಪಸ್ಥಿತರಿಲ್ಲದ ರಾಹುಲ್ ಗಾಂಧಿಯವರನ್ನು ಅನಗತ್ಯ ಟೀಕಿಸಿದರು ಎಂದು ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲರು ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ್ದಾರೆ.

- Advertisement -


ಗಾಂಧಿ ಯಾಕೆ ನೆಹರು ಸರ್ ನೇಮ್ ಬಳಸುತ್ತಿಲ್ಲ ಎಂದು ಮೋದಿಯವರು ಪ್ರಶ್ನಿಸಿದ್ದರು.
“ಮಗಳು ತಂದೆಯ ಸರ್ ನೇಮ್ ಪಡೆಯುವ ಪದ್ಧತಿ ರೂಢಿಯಲ್ಲಿಲ್ಲ ಎಂಬುದು ಮೋದಿಯವರಿಗೆ ತಿಳಿದಿದ್ದರೂ ಪ್ರಧಾನಿ ಬೇಡದ್ದು ಮಾತನಾಡಿದ್ದಾರೆ, ಗೇಲಿ ಮಾಡಿದ್ದಾರೆ” ಎಂದು ಕಾಂಗ್ರೆಸ್ ಸದಸ್ಯ ವೇಣುಗೋಪಾಲ್ ಹಕ್ಕುಚ್ಯುತಿ ಮಂಡಿಸಿದ್ದಾರೆ.
ಬಿಜೆಪಿ ಸಂಸದ ನಿಶಿಕಾಂತ ದುಬೆಯವರು, ರಾಹುಲ್ ಗಾಂಧಿಯವರ ಲಂಡನ್ ಮಾತಿಗಾಗಿ ಅವರನ್ನು ಸಂಸತ್ ಸದಸ್ಯತನದಿಂದ ಉಚ್ಚಾಟಿಸಬೇಕು ಎಂಬುದಕ್ಕೆ ಈ ಹಕ್ಕುಚ್ಯುತಿ ಉತ್ತರ ಎನ್ನುವವರೂ ಇದ್ದಾರೆ.
ಸೋಮವಾರ ಬಜೆಟ್ ಮುಂದುವರಿದ ಅಧಿವೇಶನ ಆರಂಭವಾದರೂ ಕಲಾಪ ಏನೇನೂ ನಡೆದಿಲ್ಲ. ರಾಹುಲ್ ಗಾಂಧಿಯವರು ಲಂಡನ್’ನಲ್ಲಿ ಮಾತನಾಡುತ್ತ ಪ್ರಜಾಪ್ರಭುತ್ವ ಕೊಲೆಯಾಗುತ್ತಿದೆ ಎಂದು ದೇಶವನ್ನು ಅವಮಾನಿಸಿದ್ದಾರೆ ಎಂಬುದು ಕೇಂದ್ರ ಮಂತ್ರಿಗಳ ವಾದವಾಗಿದೆ.



Join Whatsapp