ಬೆಳಗಾವಿ: ಇದುವರೆಗೆ ರಾಜ್ಯದ 600 ಮದರಸಗಳನ್ನು ಮುಚ್ಚಿಸಿದ್ದೇನೆ, ಉಳಿದ ಎಲ್ಲವನ್ನೂ ಮುಚ್ಚಿಸುತ್ತೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಕರ್ನಾಟಕದ ಬೆಳಗಾವಿಯ ಶಿವಾಜಿ ಮಹಾರಾಜ ಗಾರ್ಡನ್’ನಲ್ಲಿ ನಡೆದ ಶಿವ ಚರಿತೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಸ್ಸಾಂನಲ್ಲಿ ಬಾಂಗ್ಲಾದೇಶಿ ವಲಸಿಗರು ಸ್ಥಳೀಯ ಸಂಸ್ಕೃತಿಗೆ ಮಾರಕವಾಗಿರುವುದರಿಂದ ಮದರಸ ಮುಚ್ಚಿಸುವುದು ಅನಿವಾರ್ಯ. ನಮಗೇಕೆ ಮದರಸ? ಎಂದು ಸಹ ಶರ್ಮಾ ಪ್ರಶ್ನಿಸಿದರು.
ಮದರಸಗಳನ್ನು ಮುಚ್ಚುವ ಇಲ್ಲವೇ ಸಾಮಾನ್ಯ ಶಾಲೆ ಮಾಡುವ ಅಸ್ಸಾಂ ಸರಕಾರದ ತೀರ್ಮಾನವನ್ನು ಗುವಾಹಟಿ ಉಚ್ಚ ನ್ಯಾಯಾಲಯವು ಸರಿ ಎಂದು ಹೇಳಿದೆ. ಹಲವು ಮದರಸದವರು ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ಮದರಸ ಮುಚ್ಚಿ ಸರಕಾರಿ ಸಾಮಾನ್ಯ ಶಾಲೆ ಮಾಡುವ ಶರ್ಮಾ ಸರಕಾರದ ತೀರ್ಮಾನದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಇಲ್ಲಿಯವರೆಗೆ ಏನೂ ಹೇಳಿಲ್ಲ.
ಶಿಕ್ಷಣವು ಜಾತ್ಯತೀತ ಆಗಿರಬೇಕು ಎಂಬುದಕ್ಕಾಗಿ ಎಲ್ಲ ಮದರಸಗಳನ್ನು ಸಾಮಾನ್ಯ ಶಾಲೆ ಮಾಡಲಾಗುತ್ತಿದೆ. ಮದರಸ ಶಿಕ್ಷಣಗಳು ಕೂಡ 2020ರವರೆಗೆ ಬಹುತೇಕ ಸರಕಾರದ ವೆಚ್ಚದಲ್ಲೇ ನಡೆಯುತ್ತಿತ್ತು. ಅಸ್ಸಾಂ ಸರಕಾರವು ಶಿಕ್ಷಣದಲ್ಲಿ ಯಾವುದೇ ಒಂದು ಗುಂಪಿಗೆ ಲಾಭ ಆಗುವುದನ್ನು ಬಯಸುವುದಿಲ್ಲ. ಅದನ್ನು ಗೌಹಾತಿ ಹೈಕೋರ್ಟ್ ಎತ್ತಿ ಹಿಡಿಯಿತು.
ಕ್ರಿಶ್ಚಿಯನ್, ಮುಸ್ಲಿಂ ಎನ್ನುವವರ ಬಗ್ಗೆ ನನಗೆ ಸಮಸ್ಯೆ ಇಲ್ಲ. ಆದರೆ ನನ್ನಂತೆ ಹೆಮ್ಮೆಯ ಹಿಂದೂ ಎಂದು ಹೇಳಿಕೊಳ್ಳುವವರು ನನಗೆ ಬೇಕಾಗಿದ್ದಾರೆ ಎಂದೂ ಹಿಮಂತ ಬಿಸ್ವ ಶರ್ಮಾ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ಸಿಗರು ಈಗಿನ ಮೊಗಲರು ಎಂದು ಟೀಕಿಸಿದ ಅವರು, “ಒಂದು ಕಾಲದಲ್ಲಿ ಮೊಗಲರು ಆಲಯಗಳನ್ನು ದಿಲ್ಲಿಯಲ್ಲಿದ್ದು ಉರುಳಿಸಿದರು; ಈಗ ಮೋದಿಯವರ ಕಾಲದಲ್ಲಿ ದೇವಾಲಯ ಕಟ್ಟಲಾಗುತ್ತಿದೆ. ಇದು ಕಾಂಗ್ರೆಸ್ಸಿಗರ ಮೊಗಲ್ ಭಾರತವಲ್ಲ, ನವ ಭಾರತ” ಎಂದು ಶರ್ಮಾ ಹೇಳಿದರು.
“ಕಾಂಗ್ರೆಸ್ ಮತ್ತು ಕಮ್ಯೂನಿಸ್ಟರು ಬಾಬರ್, ಔರಂಗಜೇಬ್, ಶಾಜಹಾನ್ ಚರಿತ್ರೆಯ ದೊಡ್ಡ ಶಕ್ತಿಗಳು ಎಂದರು. ನಾನು ಹೇಳುತ್ತೇನೆ ಛತ್ರಪತಿ ಶಿವಾಜಿ, ಗುರು ಗೋಬಿಂದ ಸಿಂಗ್ ಇತಿಹಾಸದ ದೊಡ್ಡ ಶಕ್ತಿಗಳು” ಎಂದೂ ಶರ್ಮಾ ಹೇಳಿದರು.