ಹೊಸದಿಲ್ಲಿ: ಅಲಹಾಬಾದ್ ಉಚ್ಚ ನ್ಯಾಯಾಲಯದ ಆವರಣದೊಳಗಿರುವ ಮಸೀದಿಯನ್ನು ಮೂರು ತಿಂಗಳೊಳಗೆ ತೆರವುಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ನ್ಯಾಯಾಲಯದ ಆವರಣದಿಂದ ಮಸೀದಿಯನ್ನು ಮೂರು ತಿಂಗಳೊಳಗೆ ಸ್ಥಳಾಂತರಿಸಬೇಕೆಂದು 2017ರ ನವೆಂಬರ್ನಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಮಸೀದಿಯ ವಕ್ಫ್ ಮಂಡಳಿ ಮತ್ತು ಉತ್ತರಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಮೂರು ತಿಂಗಳೊಳಗೆ ಮಸೀದಿಯನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾ.ಎಂ.ಆರ್.ಶಾ ಮತ್ತು ನ್ಯಾ. ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು, ಮಸೀದಿಯ ಭೋಗ್ಯದ ಅವಧಿಯು ಮುಗಿದಿರುವ ಕಾರಣ ಅದರ ಮೇಲಿನ ಹಕ್ಕನ್ನು ಪ್ರತಿಪಾದಿಸಲು ಅರ್ಜಿದಾರರಿಗೆ ಅವಕಾಶವಿಲ್ಲ ಎಂದು ತಿಳಿಸಿದೆ.