ಒಳ್ಳೆಯತನಕ್ಕೆ ಅವರು ಮತ್ತೊಂದು ಉದಾಹರಣೆ: ಧ್ರುವನಾರಾಯಣ್ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ

Prasthutha|

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್. ಧ್ರುವನಾರಯಣ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

- Advertisement -


‘ದೇವರು ಇಷ್ಟೊಂದು ಕ್ರೂರಿ ಆಗಬಾರದಿತ್ತು. ದೇವರು ಇದ್ದಾನೋ ಇಲ್ಲವೋ ಅನ್ನುವಷ್ಟು ಅನುಮಾನವನ್ನು ಧ್ರುವನಾರಾಯಣ ಸಾವು ತಂದಿದೆ. ಧ್ರುವ ನಮ್ಮ ಕಾರ್ಯಾಧ್ಯಕ್ಷ ಎಂಬುದಕ್ಕಿಂತ ನಮ್ಮ ಕುಟುಂಬದ ಸದಸ್ಯ, ಸಹೋದರನಂತಿದ್ದರು. ನಮ್ಮ ಹೃದಯಕ್ಕೆ ಹತ್ತಿರವಾಗಿದ್ದಾರೆ. ಅವರ ಅಗಲಿಕೆ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದು ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರಿಗೆ ಶನಿವಾರ ಬೆಳಗ್ಗೆ ಪ್ರತಿಕ್ರಿಯಿಸಿದರು.


ಹುಟ್ಟು ಸಾವಿನ ನಡುವೆ ಇರುವ ಸಮಯವನ್ನು ಹೇಗೆ ಸದ್ಬಳಕೆ ಮಾಡಬಹುದು ಎನ್ನುವುದಕ್ಕೆ ಧ್ರುವನಾರಾಯಣ್ ಉತ್ತಮ ಸಾಕ್ಷಿ. ಒಳ್ಳೆಯತನಕ್ಕೆ ಅವರು ಮತ್ತೊಂದು ಉದಾಹರಣೆ. ಅವರ ಸಾರ್ಥಕ ಬದುಕು ಆದರ್ಶಪ್ರಾಯ. ಅವರ ಅಗಲಿಕೆ ನಷ್ಟಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ರಾಜಕೀಯ ರಂಗಕ್ಕೆ ಬಹುದೊಡ್ಡ ನಷ್ಟ ಎಂದು ಹೇಳಿದರು.
ಅವರು ಯಾವುದೇ ಜವಾಬ್ದಾರಿ ತೆಗೆದುಕೊಂಡರೂ ಸಮರ್ಥವಾಗಿ ನಿಭಾಯಿಸುತ್ತಿದ್ದರು. ಬಹಳ ಸಜ್ಜನ ರಾಜಕಾರಣಿ. ಮಾನವೀಯತೆ, ಸ್ನೇಹ, ಬೇರೆಯವರನ್ನು ನೋಯಿಸದ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿ. ಎಲ್ಲ ಸಮಾಜ, ಧರ್ಮದವರನ್ನು ಸಮಾನವಾಗಿ ಪ್ರೀತಿಯಿಂದ ಕಾಣುತ್ತಿದ್ದರು. ಎಷ್ಟೇ ಕಷ್ಟವಿದ್ದರೂ ಬಹಳ ತಾಳ್ಮೆಯಿಂದ ಕೆಲಸ ಮಾಡುತ್ತಿದ್ದರು. ಅವರು ಪಕ್ಷದ ದೊಡ್ಡ ಆಸ್ತಿ ಆಗಿದ್ದರು. ರಾಜ್ಯ ರಾಜಕೀಯದ ಇತಿಹಾಸದಲ್ಲಿ ಧ್ರುವನಾರಯಣ್ ಅವರ ಸೇವೆ ಒಂದು ಉತ್ತಮ ಅಧ್ಯಾಯ ಎಂದರು.

- Advertisement -


ಅವರ ಅಗಲಿಕೆ ಸುದ್ದಿ ತಿಳಿದ ಸೋನಿಯಾ ಗಾಂಧಿ ಅವರು ನನಗೆ ಕರೆ ಮಾಡಿ ನಂಬಲು ಸಾಧ್ಯವಿಲ್ಲ ಎಂದು ಹೇಳಿದರು. ಈ ವಿಚಾರ ನಮಗೂ ನಂಬಲು ಸಾಧ್ಯವಾಗುತ್ತಿಲ್ಲ. ಇಂದು ನಡೆಯಬೇಕಿದ್ದ ರಾಮನಗರದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಿದ್ದೇವೆ. ಈ ನಷ್ಟವನ್ನು ತಡೆಯಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಮಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಅವರು ಮಾಡಿದ ಸೇವೆ, ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ರಾಜ್ಯ ಪ್ರವಾಸ ಮಾಡಿದ್ದರು. ಚಾಮರಾಜನಗರ ಆಕ್ಸಿಜನ್ ದುರಂತ ಸಂದರ್ಭದಲ್ಲಿ ಅವರ ಸ್ಪಂದನೆ, ಬದ್ಧತೆ ಎಲ್ಲವೂ ಇತಿಹಾಸ ಪುಟ ಸೇರಲಿದೆ.
ಕೆಪಿಸಿಸಿ ಕಚೇರಿಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸಿ ನಂತರ ಮೈಸೂರಿಗೆ ನಾನು ತೆರಳುತ್ತೇನೆ.


ಅವರ ಅಗಲಿಕೆ ನೋವು ನನ್ನನ್ನು ಆವರಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನಮ್ಮೆಲ್ಲರಿಗೂ ಭಗವಂತ ನೀಡಲಿ’ ಎಂದು ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.



Join Whatsapp