ಮಹಿಳೆಯರ ಮತಗಳು ಬದಲಾವಣೆ ತರಲು ಬಳಕೆಯಾಗಲಿ: ಆಮ್‌ ಆದ್ಮಿ ಪಾರ್ಟಿ ನಾಯಕಿಯರ ಅಭಿಪ್ರಾಯ

Prasthutha|

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಹಿಂದಿನ ದಿನವಾದ ಮಂಗಳವಾರದಂದು ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ಮಹಿಳಾ ನಾಯಕಿಯರು ಒಟ್ಟಾಗಿ ಸುದ್ದಿಗೋಷ್ಠಿ ನಡೆಸಿದರು.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಆಮ್‌ ಆದ್ಮಿ ಪಾರ್ಟಿ ಸ್ಪರ್ಧಾಕಾಂಕ್ಷಿ ಶಾಂತಲಾ ದಾಮ್ಲೆ, “ಕರ್ನಾಟಕದಲ್ಲಿ ಮಹಿಳಾ ಮತದಾರರು ಸರಿಸುಮಾರು ಶೇ. 48ರಷ್ಟು ಇದ್ದಾರೆ. ಸಮಾಜಕ್ಕೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ನೆರವಾಗುವ ಪಕ್ಷಕ್ಕೆ ಈ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರು ಮತ ಚಲಾಯಿಸಬೇಕಿದೆ. ಯಥಾಸ್ಥಿತಿಗೆ ಸವಾಲು ಹಾಕಿ ಬದಲಾವಣೆ ತರುವುದು ಈ ವರ್ಷದ ಮಹಿಳಾ ದಿನದ ಧ್ಯೇಯವಾಗಿದೆ. ಆದ್ದರಿಂದ ಕಳಪೆ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಹಾಳಾಗಿರುವ ರಸ್ತೆಗಳು, ಭ್ರಷ್ಟಾಚಾರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮುಂತಾದವುಗಳನ್ನು ಪ್ರಶ್ನಿಸಿ ಬದಲಾವಣೆ ತರುವ ಬಗ್ಗೆ ಮಹಿಳೆಯರು ಯೋಚಿಸಿ ಮತದಾನ ಮಾಡಬೇಕು” ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ ಮಾತನಾಡಿ, “ಮಹಿಳೆಯರು ತಮ್ಮ ಭಾವನೆಯನ್ನು ನಿರ್ಭೀತಿಯಿಂದ ಸಮಾಜದ ಮುಂದೆ ವ್ಯಕ್ತಪಡಿಸುವಂತಹ ವಾತಾವರಣ ನಿರ್ಮಾಣವಾದಾಗ ಮಹಿಳಾ ಸಬಲೀಕರಣ ಜಾರಿಗೆ ಬಂದಿದೆ ಎನ್ನಬಹುದು. ಆಮ್‌ ಆದ್ಮಿ ಪಾರ್ಟಿಯು ಮಹಿಳಾ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದೆ. 2015ರಲ್ಲಿ ದೆಹಲಿಯ ಕೇಜ್ರಿವಾಲ್‌ ಸರ್ಕಾರವು “ಮಹಿಳಾ ಸುರಕ್ಷಾ ದಳ” ಆರಂಭಿಸಿ, ಇದಕ್ಕಾಗಿ ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ 10ರಿಂದ 15 ಕಾರ್ಯಕರ್ತೆಯರನ್ನು ನೇಮಕ ಮಾಡಿದೆ. ಅಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾದರೂ ಈ ಕಾರ್ಯಕರ್ತೆಯರು ತಕ್ಷಣವೇ ಸ್ಪಂದಿಸಿ ನೆರವು ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಮಹಿಳಾ ಆಯೋಗದ ಅಧ್ಯಕ್ಷರಾಗುವವರು ಸರ್ಕಾರದ ಸೌಲಭ್ಯಗಳಿಗಾಗಿ ಕಾರ್ಯನಿರ್ವಹಿಸಿ, ಮಹಿಳೆಯರಿಂದ ಅರ್ಜಿಗಳು ಬಂದಾಗ ಮಾತ್ರ ಪರಿಶೀಲನೆ ಮಾಡುವುದನ್ನು ನೋಡುತ್ತಿದ್ದೇವೆ. ಆದರೆ ದೆಹಲಿಯ ಮಹಿಳಾ ಆಯೋಗವು ಎಲ್ಲಿ ಮಹಿಳೆಯರಿಗೆ ತೊಂದರೆಯಾದರೂ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ರಕ್ಷಣೆಗೆ ಮುಂದಾಗುತ್ತಿದೆ. ಪಂಜಾಬ್‌ ಸರ್ಕಾರ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದೆ. ದೆಹಲಿಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ್ದರಿಂದಾಗಿ, ಅವರಿಗೆ ಹಣ ಉಳಿಯುವ ಜೊತೆಗೆ ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದಾಗಿ ಅವರಿಗೆ ಪುರುಷರೊಂದಿಗೆ ಒಬ್ಬಳೇ ಪ್ರಯಾಣಿಸಬೇಕಾದ ಆತಂಕ ದೂರವಾಗಿದೆ. ಗಲ್ಲಿಗಲ್ಲಿಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವ ಮೂಲಕ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿದೆ” ಎಂದು ಹೇಳಿದರು.

- Advertisement -

ಆಮ್‌ ಆದ್ಮಿ ಪಾರ್ಟಿ ವಕ್ತಾರರಾದ ಉಷಾ ಮೋಹನ್‌ ಮಾತನಾಡಿ, “ದೆಹಲಿಯಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಮಹಿಳಾ ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆಯಲಾಗಿದ್ದು, 24 ಗಂಟೆಗಳೂ ಮಹಿಳೆಯರಿಗೆ ಸೇವೆಗಳು ದೊರೆಯುತ್ತಿವೆ. ಜೊತೆಗೆ, ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ಸ್‌ಗಳನ್ನೂ ಅಲ್ಲಿ ವಿತರಿಸಲಾಗುತ್ತಿದೆ. ಸುರಕ್ಷತೆಗಾಗಿ ಬೀದಿದೀಪಗಳ ಅಳವಡಿಕೆ, ಬಸ್‌ಗಳಲ್ಲಿ ಮಾರ್ಷಲ್‌ಗಳ ನೇಮಕ ಮುಂತಾದ ಕ್ರಮಗಳನ್ನು ಕೈಗೊಂಡಿದೆ. ಆದರೆ ಕರ್ನಾಟಕದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ ವಿತರಿಸುವ ಯೋಜನೆಯನ್ನೂ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿರುವುದು ದುರದೃಷ್ಟಕರ” ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿ ಮುಖಂಡರಾದ ಅಂಜನಾ ಗೌಡ ಹಾಗೂ ಜ್ಯೋತಿ ಉಪಸ್ಥಿತರಿದ್ದರು.



Join Whatsapp