ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿದ ಪಶ್ಚಿಮ ಬಂಗಾಳದ ಕಾಂಗ್ರೆಸ್ ವಕ್ತಾರ ಕೌಸ್ತವ್ ಬಗ್ಚಿಯವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಶುಕ್ರವಾರ ಬರ್ತೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶನಿವಾರ ಬೆಳಿಗ್ಗೆ ಬಗ್ಚಿಯವರನ್ನು ಅವರ ಮನೆಯಿಂದ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೊಲ್ಕತ್ತಾದ ಬರ್ತೋಲ ಪೊಲೀಸ್ ಠಾಣೆಯ ದೊಡ್ಡ ಪೊಲೀಸ್ ಪಡೆಯೇ ಇಂದು ಮುಂಜಾವ ಮೂರೂವರೆ ಗಂಟೆಗೆ 24 ಪರಗಣ ಜಿಲ್ಲೆಯ ಬ್ಯಾರಕ್ ಪೋರ್’ನಲ್ಲಿರುವ ಮನೆಗೆ ದಾಳಿಯಿಟ್ಟಿತ್ತು.
“ನಾವು ಅವರ ಮನೆಯಿಂದ ಕೌಸ್ತವ್ ಬಗ್ಚಿಯವರನ್ನು ಬಂಧಿಸಿದೆವು. ನಾವು ಆ ಬಗ್ಗೆ ಹೆಚ್ಚಿಗೇನೂ ಮಾತನಾಡುವುದಿಲ್ಲ. ನಮ್ಮ ಹಿರಿಯ ಅಧಿಕಾರಿಗಳು ಮಾತನಾಡುತ್ತಾರೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ವಕೀಲರಾಗಿರುವ ಬಗ್ಚಿಯವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ವ್ಯಕ್ತಿಗತ ದಾಳಿಗೆ ಇಳಿದಿರುವುದನ್ನು ತೀವ್ರವಾಗಿ ಖಂಡಿಸಿದರು. ಪಶ್ಚಿಮ ಬಂಗಾಳದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಧಿರ್ ರಂಜನ್ ಚೌಧರಿಯವರು ಸದರ್ ದಿಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಲೇ ಮುಖ್ಯಮಂತ್ರಿ ಸೇಡಿಗೆ ಮುಂದಾಗಿದ್ದಾರೆ ಎಂದು ಹೇಳಿದರು.
ಬಗ್ಚಿಯವರನ್ನು ಬಂಧಿಸಿ ಬರ್ತೋಲ ಠಾಣೆಗೆ ತರಲಾಯಿತು, ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು.
ಭಾರತೀಯ ದಂಡ ಸಂಹಿತೆಯ ಕ್ರಿಮಿನಲ್ ಸಂಚು 120(ಬಿ), ಶಾಂತಿ ಕದಡಲು ಉದ್ದೇಶಪೂರ್ವಕವಾಗಿ ಹೀನ ನುಡಿ 504, ಬೆದರಿಸುವ ಅಪರಾಧ 506 ಮೊದಲಾದ ವಿಧಿಗಳಡಿ ಬಗ್ಚಿ ಮೇಲೆ ಪ್ರಕರಣ ದಾಖಲಿಸಲಾಗಿದೆ.