ಮುಂಬೈ: ಪಾಕಿಸ್ತಾನ, ಚೀನಾ ಹಾಗೂ ಹಾಂಕಾಂಗ್’ನಲ್ಲಿ ತರಬೇತಿ ಪಡೆದ `ಡೇಂಜರಸ್’ ವ್ಯಕ್ತಿಯೊಬ್ಬ ಮುಂಬೈ ಪ್ರವೇಶಿಸಿದ್ದು, ನಿಗಾ ವಹಿಸುವಂತೆ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಮುಂಬೈ ಪೊಲೀಸರಿಗೆ ಇ-ಮೇಲ್ ಸಂದೇಶ ರವಾನಿಸಿತ್ತು. ಆದರೆ ಇದು ತಪ್ಪು ತಿಳುವಳಿಕೆಯಿಂದ ಕೂಡಿದ ಮಾಹಿತಿ ಎಂಬುದು ಬೆಳಕಿಗೆ ಬಂದಿದೆ.
ಈ ಡೇಂಜರಸ್ ವ್ಯಕ್ತಿ ಇಂದೋರ್ ಮೂಲದ ಸರ್ಫರಾಜ್ ಮೆಮನ್ ಎಂದು ಎನ್’ಐಎ ಗುರುತಿಸಿತ್ತು. ಈತ ಈಗಾಗಲೇ ಮುಂಬೈ ಪ್ರವೇಶ ಮಾಡಿದ್ದಾನೆ. ಉಗ್ರ ಕೃತ್ಯಗಳನ್ನೂ ಎಸಗುವ ಸಾಧ್ಯತೆಯಿದೆ ಎಂದು ಇ-ಮೇಲ್’ನಲ್ಲಿ ತಿಳಿಸಿತ್ತು.
ಆದರೆ ಸರ್ಫರಾಝ್ ಮೂಲತಃ ಮಧ್ಯಪ್ರದೇಶದ ಇಂದೋರ್’ನವರಾಗಿದ್ದು ಚೀನಾದಲ್ಲಿ ಬಂಧನವಾಗಿರುವುದಾಗಿ ವರದಿಯಾಗಿತ್ತು. ಅದಕ್ಕೆ ವಿವರಣೆ ನೀಡಿರುವ ಸರ್ಫರಾಝ್, ನನ್ನ ಪತ್ನಿ ಚೀನೀಯಳಾಗಿದ್ದು, ಆಕೆ ನನ್ನನ್ನು ಗೂಢಚಾರ ಎಂದು ತಪ್ಪು ತಿಳಿದದ್ದರಿಂದ ನನ್ನ ಬಂಧನವಾದುದು ನಿಜ. ಆಮೇಲೆ ನನ್ನ ವಕೀಲರಿಂದ ನನ್ನ ಬಿಡುಗಡೆಯಾಗಿದೆ. ಈಗ ನನ್ನ ಚೀನೀ ಹೆಂಡತಿ ಮತ್ತು ನಾನು ಇಬ್ಬರೂ ಡೈವೋರ್ಸ್ ಪಡೆಯಲು ಕಾನೂನು ಕ್ರಮ ಅನುಸರಿಸುತ್ತಿರುವುದಾಗಿ ಸರ್ಫರಾಝ್ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಎನ್’ಐಎ- ರಾಷ್ಟ್ರೀಯ ತನಿಖಾ ದಳವು ಸರ್ಫರಾಝ್ ಎಂಬ ಅಪಾಯಕಾರಿ ವ್ಯಕ್ತಿಯು ವಿದೇಶದಲ್ಲಿ ತರಬೇತಿ ಪಡೆದು ಮುಂಬೈಗೆ ಬರುವುದಾಗಿ ಅಲ್ಲಿನ ಪೊಲೀಸರಿಗೆ ಮತ್ತು ಮಧ್ಯಪ್ರದೇಶದ ಪೊಲೀಸರಿಗೆ ಎಚ್ಚರಿಕೆ ನೀಡಿರುವುದು, ಅವರು ಕ್ಷಿಪ್ರ ದಾಳಿಗೆ ತಯಾರಾಗಿರುವುದು ಸಹ ವರದಿಯಾಗಿತ್ತು.
ಹಲವು ಭಾಷೆ ಮಾತನಾಡುವ ಸರ್ಫರಾಝ್ ಎಲ್ಲ ದಾಖಲೆಗಳನ್ನು ಹೊಂದಿದ್ದು ಭಾರತಕ್ಕೆ ಬರುತ್ತಿದ್ದಾನೆ ಎಂದೂ, ಕೆಲವು ಮಾಧ್ಯಮಗಳಲ್ಲಿ ಬಂದಿದ್ದಾನೆ ಎಂದೂ ಸುದ್ದಿಯಾಗಿದ್ದವು.
ತನಿಖಾ ಸಂಸ್ಥೆಗಳು ಆತನ ಹಿನ್ನೆಲೆಯನ್ನು ಹುಡುಕುತ್ತಿರುವುದಾಗಿ ತಿಳಿದು ಬಂದಿದೆ. ಚೀನಾದಲ್ಲಿ ಎನ್’ಐಎಯವರ ತಪ್ಪು ಇಮೇಲ್ ನೋಡಿ ನನ್ನನ್ನು ಗೂಢಚಾರ ಎಂದು ಪತ್ನಿ ಆಪಾದಿಸಿದ್ದಳು. ಈಗ ನನ್ನನ್ನು ಉಗ್ರ ಎನ್ನುತ್ತಿರುವುದು ಅಚ್ಚರಿಯಾಗಿದೆ ಎಂದೂ ಸರ್ಫರಾಝ್ ತಿಳಿಸಿರುವುದಾಗಿ ವರದಿಯಾಗಿದೆ.