ಸುರತ್ಕಲ್ ಕ್ಷೇತ್ರದಲ್ಲಿ ಪಕ್ಷದಿಂದ ಯಾರಿಗೆ ಟಿಕೆಟ್ ಸಿಕ್ಕಿದರೂ ಒಗ್ಗಟ್ಟಾಗಿ ಗೆಲುವಿಗೆ ಶ್ರಮ: ಮೊಯ್ದೀನ್ ಬಾವ

Prasthutha|

ಮಂಗಳೂರು: ಮಂಗಳೂರು ಉತ್ತರ (ಸುರತ್ಕಲ್) ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಸದ್ಯ ಸರ್ವೆ ನಡೆಯುತ್ತಿದೆ. ಅಭ್ಯರ್ಥಿ ಅಂತಿಮವಾಗಿಲ್ಲ. ಯಾರಿಗೆ ಟಿಕೆಟ್ ಕೊಟ್ಟರೂ ಎಲ್ಲರೂ ಒಂದಾಗಿ ಕಾಂಗ್ರೆಸ್ಸನ್ನು ಗೆಲ್ಲಿಸಲು ತೀರ್ಮಾನಿಸಿದ್ದೇವೆ ಎಂದು ಮಾಜಿ ಶಾಸಕ ಮೊಯ್ದೀನ್ ಬಾವ ತಿಳಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಅವರು ಮಾರ್ಚ್  2ರಂದು ಸುರತ್ಕಲ್ ಮತ್ತು ಗುರುಪುರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ.  ಕಾರ್ಯಕರ್ತರೊಡನೆ ಸ್ಪಂದನಾ ಕಾರ್ಯಕ್ರಮ ಈಗಾಗಲೇ ಎಲ್ಲೆಡೆ ನಡೆಯುತ್ತಿದೆ. ಅದರ ಅಂಗವಾಗಿ ಗುರುಪುರದಲ್ಲಿ  ಬೆಳಿಗ್ಗೆ ಹಾಗೂ ಸಂಜೆ ಸುರತ್ಕಲ್ ಬಳಿ ಕೃಷ್ಣಾಪುರದಲ್ಲಿ ಸಾರ್ವಜನಿಕ ಸಭೆ ನಡೆಯುತ್ತದೆ ಎಂದು ಬಾವಾ ತಿಳಿಸಿದರು.

ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಬಿ. ಕೆ. ಹರಿಪ್ರಸಾದ್, ಮಧು ಬಂಗಾರಪ್ಪ ಮೊದಲಾದವರಲ್ಲದೆ ಸ್ಥಳೀಯವಾಗಿ ಮಿಥುನ್ ರೈ, ರಮಾನಾಥ ರೈ, ಅಭಯಚಂದ್ರ ಜೈನ್ ಮೊದಲಾದವರು ಭಾಗವಹಿಸುವರು ಎಂದು ಅವರು ಹೇಳಿದರು.

- Advertisement -

ಸುರತ್ಕಲ್ ಮಾರುಕಟ್ಟೆಗೆ 60 ಕೋಟಿ ರೂಪಾಯಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗಲೇ ಬಹುತೇಕ ಬಂದಿತ್ತು. ಅದನ್ನು ಬಿಜೆಪಿಯವರು ಖರ್ಚು ಮಾಡಿದ್ದಾರೆ. ಆದರೆ ಕೆಲಸ ಅರೆಬರೆ ಆಗಿದೆ. ಮಹಾನಗರ ಪಾಲಿಕೆ ಕೆಲಸದಲ್ಲೂ ಅದೇ ಕತೆ ಎಂದು ಬಾವಾ ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕವಿತಾ ಸನಿಲ್, ಶಶಿಧರ ಹೆಗ್ಡೆ, ಪುರುಷೋತ್ತಮ, ಅಲ್ತಾಫ್, ಅನಿಲ್ ಕುಮಾರ್, ಸುರೇಂದ್ರ ಕಂಬಳಿ ಮೊದಲಾದವರು ಉಪಸ್ಥಿತರಿದ್ದರು.

Join Whatsapp