ಅಧಿಕಾರಿ ಬಳಿ 20 ಲಕ್ಷ ರೂ ಜಪ್ತಿ ಮಾಡಿದ ಇ.ಡಿ.

Prasthutha|

ಬೆಂಗಳೂರು: ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್’ಎಚ್’ಎಐ) ಅಧಿಕಾರಿಯೊಬ್ಬರ ಬಳಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು 20 ಲಕ್ಷ ರೂ.ಗಳನ್ನು ಜಪ್ತಿ ಮಾಡಿದ್ದಾರೆ.

- Advertisement -


ಎನ್’ಎಚ್’ಎಐ ಪ್ರಾದೇಶಿಕ ಅಧಿಕಾರಿ ಅಕೀಲ್ ಅಹಮದ್ ಅವರ ಕಚೇರಿಯಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪತ್ತೆಯಾದ 20 ಲಕ್ಷ ರೂಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿ ವಿಚಾರಣೆ ಕೈಗೊಂಡಿದ್ದಾರೆ.


ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್’ಗಳ ಅಡಿಯಲ್ಲಿ ಸಿಬಿಐ ದಾಖಲಿಸಿದ ಎಫ್’ಐಆರ್ನ ಆಧಾರದ ಮೇಲೆ ಇಡಿ ಪಿಎಂಎಲ್’ಎ ಅಡಿಯಲ್ಲಿ ತನಿಖೆಯನ್ನು ಆರಂಭಿಸಿತ್ತು. ತನಿಖೆಯ ಸಂದರ್ಭದಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್’ಎಚ್’ಎಐ)ದ ನಗರದ ಪ್ರಾದೇಶಿಕ ಅಧಿಕಾರಿ ಅಕೀಲ್ ಅಹ್ಮದ್, ದಿಲೀಪ್ ಬಿಲ್ಡ್’ಕಾನ್ ಪ್ರೈವೇಟ್ ಲಿಮಿಟೆಡ್’ನ (ಡಿಬಿಎಲ್) ಜನರಲ್ ಮ್ಯಾನೇಜರ್ ರತ್ನಾಕರನ್ ಸಜಿಲಾಲ್ ಅವರಿಂದ ಕಾನೂನು ಬಾಹಿರವಾಗಿ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ.

- Advertisement -


ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ವೇ ಪ್ಯಾಕೇಜ್ 1 ಮತ್ತು 2ರ ಯೋಜನೆಗೆ ಅನುಮತಿ ನೀಡಲು ಅಕೀಲ್ ಅವರು ರತ್ನಾಕರನ್ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಕಳೆದ ಡಿಸೆಂಬರ್ 2022ರಲ್ಲಿ ದೆಹಲಿ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಮೂಲಕ ದಿಲೀಪ್ ಬಿಲ್ಡ್’ಕಾನ್ ಪ್ರೈವೇಟ್ ಲಿಮಿಟೆಡ್’ನ ಅಧಿಕಾರಿಗಳಿಂದ ಅಕೀಲ್ ಅಹ್ಮದ್ ಹಣ ಪಡೆಯುತ್ತಿದ್ದಾಗ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಅಕೀಲ್ ಮತ್ತು ಹಣವನ್ನು ವಶಕ್ಕೆ ಪಡೆದಿದ್ದರು. ಈ ಸಂಬಂಧ ತನಿಖೆ ನಡೆಸಿದ ಇಡಿ ಸದ್ಯ 20 ಲಕ್ಷ ರೂ. ಜಪ್ತಿ ಮಾಡಿದೆ ಎಂದು ತಿಳಿದುಬಂದಿದೆ.



Join Whatsapp