ದಿಲ್ಲಿ ಎಎಪಿ- ಬಿಜೆಪಿ ಸದಸ್ಯರ ಹೊಡೆದಾಟ: ರಣಾಂಗಣವಾದ ಪಾಲಿಕೆ ಕಚೇರಿ

Prasthutha|

ನವದೆಹಲಿ: ದಿಲ್ಲಿ ಮೇಯರ್, ಉಪ ಮೇಯರ್ ಆಯ್ಕೆ ನಡೆದರೂ ಆರು ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ ಆಗಬೇಕಾಗಿದ್ದು, ಈ ಸಂಬಂಧ ಕಳೆದ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆಯೂ ಎಎಪಿ ಮತ್ತು ಬಿಜೆಪಿ ಸದಸ್ಯರು ಹೊಡೆದಾಡಿಕೊಂಡಿದ್ದಾರೆ.

- Advertisement -


ಇಂದು ದಿಲ್ಲಿ ಮಹಾನಗರ ಪಾಲಿಕೆಯ ಕಟ್ಟಡ ದಿಲ್ಲಿ ಹೌಸ್ ಆಮ್ ಆದ್ಮಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷದ ಸಮರಾಂಗಣವಾಗಿದೆ.
ಸ್ಥಾಯಿ ಸಮಿತಿಗಳಿಗಾಗಿ ಚುನಾವಣೆಯು ಮಧ್ಯ ರಾತ್ರಿಯವರೆಗೆ ನಡೆದು ಹಲವು ಎಎಪಿ ಮತ್ತು ಬಿಜೆಪಿ ಸದಸ್ಯರು ಹೊಡೆದಾಡಿಕೊಂಡರು ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆದುಕೊಂಡರು ಎಂದು ವರದಿಯಾಗಿದೆ. ಅದರ ಜೊತೆಗೆ ಬ್ಯಾಲೆಟ್ ಬಾಕ್ಸ್ ಗಳನ್ನೇ ಆಯುಧವಾಗಿಸಿಕೊಂಡರು ಎಂದು ತಿಳಿದುಬಂದಿದೆ.


ಬುಧವಾರ ಬೆಳಿಗ್ಗೆ ಯಾವುದೂ ತಕರಾರು ಇರಲಿಲ್ಲ. ಮೇಯರ್ ಚುನಾವಣೆಯಲ್ಲಿ ಎಎಪಿಯ ಶೆಲ್ಲಿ ಒಬೆರಾಯ್ ಅವರು 150 ಮತ ಪಡೆದು ಆಯ್ಕೆಯಾದರೆ, ಬಿಜೆಪಿಯ ರೇಖಾ ಗುಪ್ತ 116 ಮತ ಪಡೆದು ಪರಾಜಿತರಾದರು. ಮೇಯರ್ ಆಯ್ಕೆಯಾದವರು ಕೂಡಲೆ ಬಿಜೆಪಿಯ ಸತ್ಯ ಶರ್ಮಾರಿಂದ ಚುನಾವಣಾಧಿಕಾರಿ ಅಧ್ಯಕ್ಷೆಯಾಗಿ ಆಸನ ಸ್ವೀಕರಿಸಿದರು. ಶೆಲ್ಲಿಯವರ ಸಮ್ಮುಖದಲ್ಲಿ ಎಎಪಿಯ ಮುಹಮ್ಮದ್ ಇಕ್ಬಾಲ್ ಅವರು 147 ಮತ ಪಡೆದು ಉಪ ಮೇಯರ್ ಆಗಿ ಆಯ್ಕೆಯಾದರು.
ಸಂಜೆ 6.30ರ ಬಳಿಕ ಸ್ಟ್ಯಾಂಡಿಂಗ್ ಕಮಿಟಿ ಚುನಾವಣೆ ನಡೆಯಬೇಕೆನ್ನುವಾಗ ಪಾಲಿಕೆಯ ದಿಲ್ಲಿ ಹೌಸ್ ಕೂಗಾಟದ ಸಂತೆಯಾಗಿ ಬದಲಾಯಿತು.
ಬಿಜೆಪಿ ಮತ್ತು ಎಎಪಿ ಸದಸ್ಯರು ಗುದ್ದಾಡಿಕೊಂಡರು. ಒಂದು ಹಂತದಲ್ಲಿ ಅಲ್ಲಿದ್ದ ನೀರಿನ ಬಾಟಲಿ, ಹಣ್ಣುಗಳು, ಬ್ಯಾಲೆಟ್ ಬಾಕ್ಸ್ ಗಳಿಂದ ಬಡಿದಾಡಿಕೊಂಡು ಒಬ್ಬರನ್ನೊಬ್ಬರು ಅತ್ತಿತ್ತ ದೂಡಾಡಿ ಎಳೆದಾಡಿದರು.
ಬಿಜೆಪಿ ಸದಸ್ಯರು ತಮ್ಮ ಮೇಲೆ ದಾಳಿ ಮಾಡಿದರು ಎಂದು ಮೇಯರ್ ಶೆಲ್ಲಿ ಒಬೆರಾಯ್ ಆರೋಪಿಸಿದರು.

- Advertisement -


“ನಾನು ಸುಪ್ರೀಂ ಕೋರ್ಟ್ ಆದೇಶದಂತೆ ಸ್ಟ್ಯಾಂಡಿಂಗ್ ಸಮಿತಿ ಚುನಾವಣೆಗೆ ತಯಾರಾಗುವಾಗ ಬಿಜೆಪಿ ಸದಸ್ಯರು ನನ್ನ ಮೇಲೆ ಮುಗಿಬಿದ್ದರು. ಇದು ಬಿಜೆಪಿಯ ಗೂಂಡಾಗಿರಿಯ ಮತ್ತೊಂದು ಮಜಲು. ಅವರು ಮಹಿಳಾ ಮೇಯರ್ ಮೇಲೆ ಹಲ್ಲೆಗೆ ಪ್ರಯತ್ನಿಸಿದರು. ನಮ್ಮ ಸದಸ್ಯರು ತಡೆದರು” ಎಂದು ಶೆಲ್ಲಿ ಒಬೆರಾಯ್ ಟ್ವೀಟ್ ಮಾಡಿದ್ದಾರೆ.

Join Whatsapp