ನವದೆಹಲಿ : ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಬೂಟಾ ಸಿಂಗ್ ಶನಿವಾರ ನಿಧನರಾಗಿದ್ದಾರೆ. ಅವರಿಗೆ 86 ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಸಿಂಗ್ ಅವರು ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಓರ್ವ ಮಗಳು ಹಾಗೂ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಅವರು ಲೋಕಸಭೆಯಲ್ಲಿ ಎಂಟು ಬಾರಿ ಗೆದ್ದಿದ್ದರು. ಗೃಹ, ಕೃಷಿ, ರೈಲ್ವೆ ಮತ್ತು ಇತರ ಸಚಿವರಾಗಿ ದೇಶದ ಗಮನ ಸೆಳೆದ ನಾಯಕ ಬೂಟಾ ಸಿಂಗ್.
ಜಲೋರ್-ಸಿರೋಹಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುತ್ತಿದ್ದ ಬೂಟಾ ಸಿಂಗ್ ದೇಶಾದ್ಯಂತ ಲಕ್ಷಾಂತರ ಅಭಿಮಾನಿ, ಬೆಂಬಲಿಗರನ್ನು ಹೊಮಸಿದ್ದಾರೆ. ಬೂಟಾ ಸಿಂಗ್ ಕೇಂದ್ರ ಸಚಿವರಾಗಿ, ಬಿಹಾರ ರಾಜ್ಯಪಾಲರಾಗಿ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ರಾಜಕೀಯ ಪ್ರವೇಶಕ್ಕೂ ಮುನ್ನಾ ಬೂಟಾ ಸಿಂಗ್ ಪತ್ರಕರ್ತರಾಗಿ ಕೆಲಸ ಮಾಡಿದ್ದರು. ಬೂಟಾ ಸಿಂಗ್ ನಿಧನಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.