ಮುಂಬೈ : ನಟಿ ಕಂಗನಾ ರಣಾವತ್ ಗೆ ಸೇರಿದ್ದ ಮುಂಬೈಯ ಕಟ್ಟಡವೊಂದರಲ್ಲಿ ಅಕ್ರಮ ನಿರ್ಮಾಣ ನಡೆಯುತ್ತಿರುವುದನ್ನು ತೆರವುಗೊಳಿಸಲು ಬೃಹನ್ಮುಂಬಯಿ ನಗರ ಪಾಲಿಕೆ ಮುಂದಾಗಿದ್ದಾಗ ಅದೇನೋ ಮಹಾ ಅನಾಹುತ ನಡೆದು ಹೋಯಿತು ಎಂಬಂತೆ ಬಿಜೆಪಿ ಬೆಂಬಲಿಗ ಮಾಧ್ಯಮಗಳು ಇತ್ತೀಚೆಗೆ ಬೊಬ್ಬಿರಿದಿದ್ದವು. ಆದರೆ, ಇದೀಗ ನ್ಯಾಯಾಲಯವೇ ತನ್ನ ತೀರ್ಪನ್ನು ನೀಡಿದ್ದು, ಕಂಗನಾ ತನ್ನ ಫ್ಲ್ಯಾಟ್ ನವೀಕರಣಗೊಳಿಸುವ ವೇಳೆ ಮಂಜೂರಾದ ಯೋಜನೆಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದಿದೆ.
ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸುವ ನಗರ ಪಾಲಿಕೆಯ ಕ್ರಮಕ್ಕೆ ತಡೆ ನೀಡುವಂತೆ ಕೋರಿದ್ದ ಕಂಗನಾರ ಅರ್ಜಿಯನ್ನು ತಿರಸ್ಕರಿಸಿರುವ ಉಪನಗರ ದಿಂಡೋಶಿ ನ್ಯಾಯಾಲಯ, ಆಕೆ ತನ್ನ ಮಾಲಕತ್ವದ ಫ್ಲಾಟ್ ಗಳ ನವೀಕರಣ ವೇಳೆ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದೆ.
ಖರ್ ಪ್ರದೇಶದಲ್ಲಿ 16 ಮಹಡಿಗಳ ಕಟ್ಟಡವೊಂದರ ಐದನೇ ಮಹಡಿಯಲ್ಲಿ ಮೂರು ಫ್ಲಾಟ್ ಗಳ ಮಾಲಕತ್ವ ಹೊಂದಿರುವ ಕಂಗನಾ, ಮೂರು ಫ್ಲಾಟ್ ಗಳನ್ನು ಒಂದಾಗಿ ಪರಿವರ್ತಿಸಲು ಕೆಲವೊಂದು ನವೀಕರಣ ಕಾಮಗಾರಿ ನಡೆಸಿದ್ದರು. ಕಟ್ಟಡ ನವೀಕರಣಕ್ಕಾಗಿ ನೀಡಲಾಗಿದ್ದ ನೀಲನಕ್ಷೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಇದು ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಅಗತ್ಯವಿರುವ ಮಂಜೂರಾದ ಯೋಜನೆಯ ಗಂಭೀರ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಆದಾಗ್ಯೂ, ಮೇಲ್ಮನವಿಗೆ ಅವಕಾಶ ನೀಡಲಾಗಿದೆ.
ಬಿಜೆಪಿಯೇತರ ಸರಕಾರ ಹೊಂದಿರುವ ಮಹಾರಾಷ್ಟ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಕಂಗನಾರ ಈ ಕಾನೂನು ಬಾಹಿರ ನಿರ್ಮಾಣದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದ ಪಾಲಿಕೆ ವಿರುದ್ಧ ದೊಡ್ಡ ಆಕ್ರೋಶದ ವಾತಾವರಣ ಸೃಷ್ಟಿಸಲಾಗಿತ್ತು. ಬಿಜೆಪಿಗರು ಮತ್ತು ಅವರ ಬೆಂಬಲಿಗ ಸುದ್ದಿ ವಾಹಿನಿಗಳು ಈ ಸಂದರ್ಭವನ್ನು ಬಳಸಿಕೊಂಡು, ಗರಿಷ್ಠ ಪ್ರಮಾಣದಲ್ಲಿ ಮಹಾರಾಷ್ಟ್ರ ಸರಕಾರದ ತೇಜೋವಧೆ ನಡೆಸಿದ್ದವು.