ಕುಟುಂಬ ರಾಜಕಾರಣ ಎಂಬ ಹಳಸಲು ವಿಷಯವನ್ನು ಇನ್ನೂ ಎಷ್ಟು ದಿನ ಲಂಬಿಸುತ್ತಾ ಕಾಲಹರಣ ಮಾಡುತ್ತೀರಿ: ಬಿಜೆಪಿಗೆ ಜೆಡಿಎಸ್ ಪ್ರಶ್ನೆ

Prasthutha|

ಬೆಂಗಳೂರು: ಕುಟುಂಬ ರಾಜಕಾರಣ ಎಂಬ ಹಳಸಲು ವಿಷಯವನ್ನು ಇನ್ನೂ ಎಷ್ಟು ದಿನ ಲಂಬಿಸುತ್ತಾ ಕಾಲಹರಣ ಮಾಡುತ್ತೀರಿ, ರಾಜ್ಯ ಬಿಜೆಪಿ ಯವರೆ? ಕಾರ್ಯಕರ್ತರ ಒತ್ತಡದಿಂದಾಗಿಯೇ ದೇವೇಗೌಡರ ಕುಟುಂಬವು ರಾಜಕಾರಣದಲ್ಲಿ ಸಕ್ರಿಯವಾಗಿರುವುದು. ತಟ್ಟೆಯಲ್ಲಿ ನೊಣ ಸತ್ತುಬಿದ್ದಿದ್ದರೂ, ಅನ್ಯರ ತಟ್ಟೆ ನೋಡುವ ಚಟವೇಕೆ? ಎಂದು ಜೆಡಿಎಸ್ ತಿರುಗೇಟು ನೀಡಿದೆ.

- Advertisement -

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಕುಟುಂಬ ರಾಜಕಾರಣದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ನಿಮಗೆ ನೈತಿಕತೆ ಇದ್ದರೆ ನಿಮ್ಮ ಪಕ್ಷದಲ್ಲಿ ಒಂದೇ ಕುಟುಂಬದವರು ಅಧಿಕಾರದಲ್ಲಿಲ್ಲ ಎಂದು ಸಾಬೀತುಪಡಿಸಿ. ನಿಮ್ಮ ಧಮ್ಮು-ತಾಕತ್ತು ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದಂತೆ, ನಿಮ್ಮವರ ಮನಸ್ಥಿತಿ ಎಂದು ಕುಟುಕಿದೆ.

ಪಕ್ಷ ಕಟ್ಟಿ, ಹೋರಾಟ ಮಾಡಿದ ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಅವಮಾನಿಸಿದಿರಲ್ಲ! ಯಾರ ‘ಸಂತೋಷ’ಕ್ಕೆ ಯಡಿಯೂರಪ್ಪನವರನ್ನು ಬಳಸಿ ಬೀಸಾಡಿದ್ರಿ? ಅವರನ್ನು ಚುನಾವಣೆಗೆ, ಅಧಿಕಾರಕ್ಕಾಗಿ ಉಪಯೋಗಿಸಿ ನಂತರ ಬಲಿಕೊಟ್ಟಿದ್ದು ಏಕೆ ಎಂದು ಹೇಳುವಿರೆ? ಎಂದು ಪ್ರಶ್ನಿಸಿದೆ.

- Advertisement -

ದೀಪ ಆರುವಾಗ ಬಹಳ ಪ್ರಕಾಶಮಾನವಾಗಿ ಉರಿಯುತ್ತದಂತೆ. ನಿಮ್ಮದು ಅದೇ ಕತೆ. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವ ಹಾಗೆ, ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿ ಬರುವ ಸೀಟುಗಳನ್ನು ಕಳೆದುಕೊಳ್ಳುತ್ತೀರಿ. ಸೋಲಿನ ಭೀತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ದುಂಬಾಲು ಬಿದ್ದಿರುವುದು ನೀವು ಎಂದು ಹರಿಹಾಯ್ದಿದೆ.

ಸೋಲು-ಗೆಲುವು ಯಾರಿಗೂ ಹೊರತಲ್ಲ. ಸೋತರೂ, ಗೆದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರಣಕ್ಕಾಗಿ ಜೆಡಿಎಸ್ ಇವತ್ತಿಗೂ ರಾಜ್ಯ ರಾಜಕಾರಣದಲ್ಲಿ ಪ್ರಸ್ತುತವಾಗಿರುವುದು. ಹಲಾಲು ಟೋಪಿ ಕೆಲಸ ಮಾಡುತ್ತಾ, ಸ್ವಾಭಿಮಾನ ಅಡ ಇಡುವ ಗುಲಾಮಗಿರಿ ನಮಗಿಲ್ಲ. ಅಂತಹ ನವರಂಗಿ ಆಟದಲ್ಲಿ ಪ್ರವೀಣರಲ್ಲವೇ ನೀವು? ಎಂದು ಜೆಡಿಎಸ್ ವ್ಯಂಗ್ಯವಾಡಿದೆ.



Join Whatsapp