ಬಾಲ್ಯ ವಿವಾಹ ತಡೆ ಹೆಸರಿನಲ್ಲಿ ಅಮಾಯಕರ ಬಂಧನ: ಗುವಾಹಟಿ ಹೈಕೋರ್ಟ್ ಅಸಮಾಧಾನ

Prasthutha|

►ಬಾಲ್ಯ ವಿವಾಹ ಪ್ರಕರಣಗಳಲ್ಲಿ ಆರೋಪಿಗಳನ್ನು ಕಸ್ಟಡಿ ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ

- Advertisement -

►ಸುಮ್ಮನೆ ಪೋಕ್ಸೋ ಸೇರಿಸಿಬಿಟ್ಟರೆ ನ್ಯಾಯಾಧೀಶರು ಗಮನಿಸುವುದಿಲ್ಲ ಎಂದುಕೊಂಡಿರಾ?

►“ಪೋಕ್ಸೋ ಹಾಕಲು ಇಲ್ಲಿ ಯಾವುದಾದರೂ ಅತ್ಯಾಚಾರ ನಡೆಸಿದ ದೂರು ಇದೆಯೇ?”

- Advertisement -

ಗುವಾಹಟಿ: ಬಾಲ್ಯವಿವಾಹದ ವಿರುದ್ಧದ ಕಾರ್ಯಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಬಂಧಿಸಿರುವುದು ಜನರ ಖಾಸಗಿ ಜೀವನದಲ್ಲಿ ವಿಧ್ವಂಸಕತೆಯನ್ನು ಸೃಷ್ಟಿಸಿರುವುದಕ್ಕೆ ಸಮನಾಗಿದೆ. ಬಾಲ್ಯ ವಿವಾಹ ಪ್ರಕರಣಗಳಲ್ಲಿ ಆರೋಪಿಗಳನ್ನು ಕಸ್ಟಡಿ ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಗುವಾಹಟಿ ಹೈಕೋರ್ಟ್ ಹೇಳಿದ್ದು, ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಅಸ್ಸಾಂ ಸರಕಾರವು ಬಾಲ್ಯ ವಿವಾಹ ತಡೆಯಲು ನಡೆಸಿದ ದಾಳಿಗಳ ಬಂಧನಗಳ ಸಂಬಂಧ ಗುವಾಹಟಿ ಉಚ್ಚ ನ್ಯಾಯಾಲಯದಿಂದ  ಕಠಿಣ ಪ್ರಶ್ನೆಗಳನ್ನು ಎದುರಿಸಿತು.  

ಅಸ್ಸಾಮ್’ನಲ್ಲಿ ಬಾಲ್ಯ ವಿವಾಹ ಸಂಬಂಧವಾಗಿ 3,000 ಜನರನ್ನು ಬಂಧಿಸಲಾಗಿದೆ. ಅವರನ್ನು ತಾತ್ಕಾಲಿಕ ಜೈಲುಗಳಲ್ಲಿ ಇಡಲಾಗಿದೆ. ತಮ್ಮ ಕುಟುಂಬದ ಏಕೈಕ ದುಡಿಯುವ ಕೈಗಳನ್ನು ಬಂಧಿಸಲಾಗಿದೆ ಎಂದು ಮಹಿಳೆಯರು ಇದರ ವಿರುದ್ಧ ಹಲವು ಕಡೆ ಪ್ರತಿಭಟನೆ ನಡೆಸಿದ್ದರು.

ಪೊಲೀಸರು ಹಲವು ವರ್ಷಗಳ ಹಿಂದೆ ನಡೆದ ಮದುವೆವನ್ನೂ ಆ ಹಿಂದಿನ ದಿನಾಂಕ ದಾಖಲಿಸಿ ಮೊಕದ್ದಮೆ ಹೂಡಿದ್ದಾರೆ; ಅಲ್ಲದೆ ಬಾಲ್ಯ ವಿವಾಹದ ಲೈಂಗಿಕತೆಯನ್ನು ಪೋಕ್ಸೋ ಕಾಯ್ದೆಯಡಿ ತಂದಿದ್ದು, ಅದನ್ನು ಕಾನೂನು ತಜ್ಞರಾರೂ ಒಪ್ಪುತ್ತಿಲ್ಲ.

ಬಾಲ್ಯ ವಿವಾಹವೆಲ್ಲ ಕಸ್ಟಡಿ ವಿಚಾರಣೆ ನಡೆಸಬೇಕಾದ ಸಂಗತಿಯಲ್ಲ ಎಂದು ಹೇಳಿರುವ ಗುವಾಹಟಿ ಹೈಕೋರ್ಟ್, ಪೋಕ್ಸೋ ಕಾಯ್ದೆಯೆಂದರೆ 20 ವರ್ಷ ಕೂಡ ಶಿಕ್ಷೆ ಆಗಬಹುದು, ಗಮನಿಸಬೇಕಾಗಿದೆ ಎಂದು 9 ಜನರಿಗೆ ಜಾಮೀನು ನೀಡಿದೆ.

“ಇದಕ್ಕೆ ಪೋಕ್ಸೋ ಹಾಕಿದ್ದೀರಾ? ಇಲ್ಲಿ ಪೋಕ್ಸೋ ಅಪರಾಧ ಏನಿದೆ? ಸುಮ್ಮನೆ ಪೋಕ್ಸೋ ಸೇರಿಸಿಬಿಟ್ಟರೆ ನ್ಯಾಯಾಧೀಶರು ಗಮನಿಸುವುದಿಲ್ಲ ಎಂದುಕೊಂಡಿರಾ? ನಾವು ಇಲ್ಲಿ ಯಾರನ್ನೂ ಬಿಡುಗಡೆ ಮಾಡುತ್ತಿಲ್ಲ; ನೀವು ತನಿಖೆ ನಡೆಸುವುದಕ್ಕೂ ಯಾವುದೇ ತಡೆಯಿಲ್ಲ” ಎಂದು ಜಸ್ಟಿಸ್ ಸುಮನ್ ಶ್ಯಾಮ್ ಹೇಳಿದ್ದಾರೆ.

“ಪೋಕ್ಸೋ ಹಾಕಲು ಇಲ್ಲಿ ಯಾವುದಾದರೂ ಅತ್ಯಾಚಾರ ನಡೆಸಿದ ದೂರು ಇದೆಯೇ?” ಎಂದು ಕೇಳಿದ ಜಸ್ಟಿಸ್, ಇದು ಕೃತಕವಾಗಿ ಸಿಲುಕಿಸಿದ ಮೊಕದ್ದಮೆಯಾಗಿದೆ ಎಂದರು.

“ಇದು ಕಸ್ಟಡಿಯಲ್ಲಿ ವಿಚಾರಣೆ ಆಗಬೇಕಾದ ವಿಚಾರವಲ್ಲ. ನೀವು ಕಾನೂನಿನಂತೆ ನಡೆಯಿರಿ, ಒಂದು ಚಾರ್ಜ್ ಶೀಟ್ ಸಲ್ಲಿಸಿರಿ. ಅವರಿಗೆ ಶಿಕ್ಷೆ ಆಗುತ್ತದೆ, ಆದೀತು. ಇದು ಜನರ ಖಾಸಗಿ ಬದಕನ್ನು ಹಾಳು ಮಾಡುತ್ತಿರುವಂತಿದೆ. ಅಲ್ಲಿ ಮಕ್ಕಳಿದ್ದಾರೆ, ಕುಟುಂಬಸ್ಥರಿದ್ದಾರೆ, ವಯೋವೃದ್ಧರಿದ್ದಾರೆ ಎಂದು ಈ ಸಂಬಂಧ ಇನ್ನೊಂದು ಪ್ರಕರಣದಲ್ಲಿ ಕೋರ್ಟ್ ಹೇಳಿತು.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಮ್ಮ ಆಡಳಿತದ ಅನಾರೋಗ್ಯವನ್ನು ಮುಚ್ಚಿಡಲು ಫೆಬ್ರವರಿಯಲ್ಲಿ ಬಾಲ್ಯ ವಿವಾಹದ ಮೇಲಿನ ದಾಳಿ ಆರಂಭಿಸಿದ್ದರು. ಈ ಸಂಬಂಧ 4,000 ಪೊಲೀಸ್ ಮೊಕದ್ದಮೆಗಳು ದಾಖಲಾಗಿವೆ.

“ಈ ಸಾಮಾಜಿಕ ಪಿಡುಗಿನ ವಿರುದ್ಧ ದಾಳಿ ನಿಲ್ಲುವುದಿಲ್ಲ; ನಮಗೆ ಅಸ್ಸಾಮಿಯರ ಬೆಂಬಲ ಇದೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಈ ದಾಳಿಯನ್ನು ವಿರೋಧ ಪಕ್ಷಗಳವರು ಟೀಕಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ತಾರುಣ್ಯದ ದಂಪತಿಯರನ್ನು ಮತ್ತು ಅವರ ಮದುವೆಗೆ ಕಾರಣರೆಂದು ಕೆಲವರನ್ನು ಬಂಧಿಸಲಾಗುತ್ತಿದೆ. ಜನರಲ್ಲಿ ಭಯ ಭೀತಿ ಹರಡಲು ಪೊಲೀಸ್ ಬಲ ಬಳಕೆಯಾಗುತ್ತಿದೆ ಎಂಬುದು ಪ್ರತಿಪಕ್ಷಗಳವರ ಟೀಕೆಯಾಗಿದೆ.

Join Whatsapp